ಟೆಲ್ ಅವೀವ್: ಹಿಜ್ಬುಲ್ಲಾ ಹೋರಾಟಗಾರರು ಇನ್ನು ಮುಂದೆ ಶೌಚಾಲಯಕ್ಕೆ ಹೋಗಲು ಅಥವಾ ಆಹಾರ ಸೇವನೆ ಮಾಡಲು ಹೆದರಬೇಕು ಎಂದು ಇಸ್ರೇಲ್ ಚೀಫ್ ಆಫ್ ದಿ ಜನರಲ್ ಸ್ಟಾಫ್ ಹರ್ಜಿ ಹಲೇವಿ ಹೇಳಿದ್ದಾರೆ.
ಲೆಬನಾನ್ ಮತ್ತು ಸಿರಿಯಾದಲ್ಲಿ ಸಾವಿರಾರು ಪೇಜರ್‌ಗಳು ಸ್ಫೋಟಗೊಂಡ ಬಳಿಕ ಇಸ್ರೇಲ್ ಕಡೆಯಿಂದ ಈ ಹೇಳಿಕೆ ಬಂದಿದೆ. ನಮ್ಮಲ್ಲಿ ಇನ್ನೂ ಅನೇಕ ಸಾಮರ್ಥ್ಯಗಳಿವೆ. ನಾವು ಪ್ರತಿ ಹಂತದಲ್ಲೂ ಕಾರ್ಯನಿರ್ವಹಿಸುತ್ತೇವೆ ಮತ್ತು ಪ್ರತಿಯೊಂದರಲ್ಲೂ ಹಿಜ್ಬುಲ್ಲಾ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಹರ್ಜಿ ಹಲೇವಿ ತಿಳಿಸಿದ್ದಾರೆ.
ನಾವು ಇಲ್ಲಿಯವರೆಗೆ ಪ್ರಯೋಗ ಮಾಡದೇ ಇರುವ ಹಲವಾರು ಸಾಮರ್ಥ್ಯಗಳು ನಮ್ಮ ಬಳಿಯಿದೆ. ಅವುಗಳಲ್ಲಿ ಕೆಲವು ನಾವು ಈಗಾಗಲೇ ಪ್ರದರ್ಶಿಸಿದ್ದೇವೆ. ಭವಿಷ್ಯದ ಕಾರ್ಯಾಚರಣೆಗಳಿಗಾಗಿ ನಾವು ಸಕ್ರಿಯವಾಗಿ ತಯಾರಿ ನಡೆಸುತ್ತಿದ್ದೇವೆ. ಪ್ರತಿ ಹಂತದಲ್ಲಿ ಯಾವ ಕಾರ್ಯಾಚರಣೆ ನಡೆಸಬೇಕು ಎನ್ನುವುದನ್ನು ಈಗಾಗಲೇ ಯೋಜಿಸಲಾಗಿದೆ ಮತ್ತು ಸಿದ್ಧವಾಗಿವೆ ಎಂದಿದ್ದಾರೆ.
ಹಮಾಸ್ ಉಗ್ರರು ಅಕ್ಟೋಬರ್ 7 ರಂದು ಇಸ್ರೇಲ್ ಪ್ರವೇಶಿಸಿ ದಾಳಿ ಮಾಡಿದ್ದರು. ಈ ದಾಳಿಗೆ ಪ್ರತೀಕಾರ ತೆಗೆದುಕೊಂಡ ಇಸ್ರೇಲ್ ಹಮಾಸ್ ಸಂಘಟನೆಯನ್ನೇ ಸಂಪೂರ್ಣ ನಾಶ ಮಾಡುವುದಾಗಿ ಘೋಷಿಸಿದೆ. ವಿದೇಶದಲ್ಲಿರುವ ಹಮಾಸ್ ನಾಯಕರು ಮತ್ತು ಹಮಾಸ್‌ಗೆ ಬೆಂಬಲ ನೀಡುವ ಎಲ್ಲಾ ಸಂಘಟನೆಗಳನ್ನು ಹೊಡೆದು ಹಾಕುತ್ತೇವೆ ಎಂದು ಇಸ್ರೇಲ್ ತಿಳಿಸಿದೆ.