ಪಶ್ಚಿಮ ಬಂಗಾಳ: ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೆಲವು ರಾಜ್ಯಗಳು ಮುನ್ನೆಚ್ಚರಿಕೆಯಿಂದ ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿವೆ. ಪಶ್ಚಿಮ ಬಂಗಾಳ ಮತ್ತೆ ಕೋವಿಡ್ ನಿರ್ಬಂಧಗಳನ್ನು ಮರಳಿ ಜಾರಿಗೊಳಿಸಿದೆ, ಪಶ್ಚಿಮ ಬಂಗಾಳ ಸರ್ಕಾರವು ಸಹ ಇಂದಿನಿಂದ ಶಾಲೆ, ಕಾಲೇಜು, ಸಿನಿಮಾ ಮಂದಿರ, ಮನರಂಜನಾ ತಾಣ, ಸಲೂನ್, ಸ್ಪಾಗಳನ್ನು ಬಂದ್ ಮಾಡಲು ನಿರ್ಧರಿಸಿದೆ.
ರಾಜ್ಯದಲ್ಲಿ ಭಾಗಶಃ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಈ ಬಗ್ಗೆ ಅಧಿಕೃತವಾಗಿ ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಚ್.ಕೆ. ದ್ವಿವೇದಿ ಅವರು ಟ್ವೀಟ್ ಮಾಡಿ, ಒಮಿಕ್ರಾನ್ ಹೆಚ್ಚಳದಿಂದಾಗಿ ಇಂದಿನಿಂದ ಶಾಲಾ, ಕಾಲೇಜು, ಥಿಯೇಟರ್ ಹಾಗೂ ಸಲೂನ್, ಸ್ಪಾಗಳನ್ನು ಬಂದ್ ಮಾಡುವುದಾಗಿ ತಿಳಿಸಿದ್ದಾರೆ.
ಕೋಲ್ಕತ್ತಾ ಸೇರಿದಂತೆ ರಾಜ್ಯದಲ್ಲಿ ಸೋಂಕು ಒಂದೇ ವಾರದಲ್ಲಿ ನಾಲ್ಕು ಪಟ್ಟು ಹೆಚ್ಚಳ ಕಂಡಿದೆ. ಇದರಿಂದಾಗಿ ವಾರದ ಪಾಸಿಟಿವಿಟಿ ದರ ಶೇ. 12.56 ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ ಆ ರಾಜ್ಯದಲ್ಲಿ 19000 ಕ್ಕೂ ಹೆಚ್ಚು ಜನ ಕೋವಿಡ್ನಿಂದಾಗಿ ಸಾವನಪ್ಪಿದ್ದಾರೆ. ಮತ್ತೊಂದೆಡೆ ಸಿಎಂ ಮಮತಾ ಬ್ಯಾನರ್ಜಿ ಅವರು ಸಹ ತಮ್ಮ ಎಲ್ಲಾ ಸಾರ್ವಜನಿಕ ಸಮಾವೇಶಗಳನ್ನು ಸದ್ಯದ ಮಟ್ಟಿಗೆ ರದ್ದುಗೊಳಿಸಿದ್ದಾರೆ.
ಪಶ್ಚಿಮ ಬಂಗಾಳ ಭಾಗಶಃ ಲಾಕ್ಡೌನ್ ಹಂತಕ್ಕೆ ತಲುಪಿದೆ. ಈಗಾಗಲೇ ಕರ್ನಾಟಕ ಸೇರಿದಂತೆ ಹಲವೆಡೆ ನೈಟ್ ಕರ್ಫ್ಯೂ ಜಾರಿಯಯಲ್ಲಿದೆ. ಜೊತೆಗೆ ದೆಹಲಿ ಸೇರಿ ಕೆಲವಡೆ ಥಿಯೇಟರ್ನಲ್ಲಿ ಶೇ.50 ರಷ್ಟು ಮಾತ್ರ ಆಸನ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕದಲ್ಲೂ ಟಫ್ ರೂಲ್ಸ್ ಜಾರಿ ಮಾಡುವ ಬಗ್ಗೆ ಇಂದು ಸಿಎಂ ಬೊಮ್ಮಾಯಿ ಸುಳಿವು ನೀಡಿದ್ದಾರೆ.
ಓಮಿಕ್ರಾನ್ ಕೇಸ್ಗಳು ಎಲ್ಲೆಡೆ ವ್ಯಾಪಿಸುತ್ತಿದೆ. ಜೊತೆಗೆ ಕೋವಿಡ್ 19 ಪ್ರಕರಣಗಳಲ್ಲಿ ಭಾರಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.