News Karnataka Kannada
Wednesday, May 01 2024
ಉತ್ತರಖಂಡ

ಉತ್ತರಖಂಡ: ಮುಕ್ತಿಯ ಮಾರ್ಗದಲ್ಲಿ ಸಾಗುವ ಜ್ಞಾನವೇ ವಿದ್ಯೆ – ಡಾ. ಸುಧಾಂಶು ತ್ರಿವೇದಿ

Knowledge that leads on the path of liberation is vidya. Sudhanshu Trivedi
Photo Credit : News Kannada

ಉತ್ತರಖಂಡ: ಆರ್ಥಿಕ ಶಕ್ತಿಗಿಂತ ಆಧ್ಯಾತ್ಮದ ಶಕ್ತಿ ಹೆಚ್ಚು‌ ಶ್ರೇಷ್ಠ. ಆಸ್ತಿ ಸಂಪಾದನೆಗಿಂತ ತ್ಯಾಗದ ಮಹತ್ವ ಹೆಚ್ಚು. ಸೂಪರ್ ಪವರ್ ಗಿಂತ ವಿಶ್ವಗುರುಗೆ ಹೆಚ್ಚು ಗೌರವ. ಅತೀ ಪುರಾತನ ನಾಗರೀಕತೆಯೊಂದಿಗೆ ಯುವ ಭಾರತ ಅಮೃತಕಾಲಘಟ್ಟದಲ್ಲಿದೆ ಎಂದು ರಾಜ್ಯಸಭಾ ಸದಸ್ಯರೂ, ಭಾಜಪಾ ರಾಷ್ಟ್ರೀಯ ವಕ್ತಾರರೂ ಆದ ಡಾ. ಸುಧಾಂಶು ತ್ರಿವೇದಿ ಹೇಳಿದರು.

ಅವರು ಉತ್ತರಖಂಡದ ಹರಿದ್ವಾರದಲ್ಲಿ ಎರಡು‌ ದಿನಗಳ‌ ತನಕ ಜರುಗುತ್ತಿರುವ ವಿಶ್ವ ಸಾರಸ್ವತ್ ಫೇಡರೇಶನ್ ಆಯೋಜಿಸಿರುವ ವಿಶ್ವ ಸಾರಸ್ವತ ಸಮ್ಮೇಳನದ ಮೊದಲ ದಿನದಂದು ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದರು.

ಸನಾತನ ಭಾರತ ಸೂಪರ್ ಪವರ್ ಆಗುವ ಬದಲು ವಿಶ್ವಗುರು ಆಗಲು ಬಯಸಲು ಮುಖ್ಯ ಕಾರಣ ತ್ಯಾಗಕ್ಕೆ ಇರುವ ಮಹತ್ವ. ಸಂತರು, ಋಷಿ, ಮುನಿಗಳ ಸಾನಿಧ್ಯದಲ್ಲಿ ನಮಗೆ ಉತ್ತಮವಾಗಿರುವುದನ್ನು ಸಾಧಿಸಲು ಪ್ರೇರಣೆ ದೊರಕುತ್ತದೆ. ಭಾರತ ಮತ್ತು ಬೇರೆ ದೇಶಗಳಿಗಿರುವ ಮುಖ್ಯ ವ್ಯತ್ಯಾಸ ಎಂದರೆ ಬೇರೆ ದೇಶಗಳಲ್ಲಿ ಹುಟ್ಟು, ಭೌತಿಕ ವಿದ್ಯೆ, ಉದ್ಯೋಗ, ಪಿಂಚಣಿ ಮತ್ತು ಸಾವು ಇದರ ನಡುವೆ ಅಲ್ಲಿನವರ ಬದುಕು ಸಾಗುತ್ತದೆ.‌ ಅಲ್ಲಿ ಮನುಷ್ಯನ ಹುಟ್ಟು ಮತ್ತು ಅಂತ್ಯದ ನಡುವೆ ವಿಶೇಷ ಇಲ್ಲ. ಆದರೆ ಭಾರತದಲ್ಲಿ ಮೋಕ್ಷಕ್ಕೆ ಸಾಗುವ ಪರಿಕಲ್ಪನೆಯೇ ನಮ್ಮ ಸಂಸ್ಕೃತಿಯನ್ನು ಶ್ರೇಷ್ಟ ಮಾಡಿದೆ. ಉಪನಿಷತ್ ಗಳಲ್ಲಿ ಉಲ್ಲೇಖ ಇರುವಂತೆ ದೇವತೆಗಳೇ ಭರತಖಂಡದ ಪುಣ್ಯಭೂಮಿಯಲ್ಲಿ ಜನ್ಮತಾಳಲು ಬಯಸುತ್ತಾರೆ. ಸರಸ್ವತಿಯ ನೆಲದಲ್ಲಿ ಜನ್ಮ ತಾಳಿದ ನಾವು ಅದೃಷ್ಟವಂತರು ಎಂದು ಅವರು ಹೇಳಿದರು.

ವೇದ ಸಂಸ್ಕೃತಿ, ಸನಾತನ ಪರಂಪರೆಯಲ್ಲಿ ವಿಶ್ವಭಾರತ ಎನ್ನುವ ವಿಷಯದಲ್ಲಿ ಮಾತನಾಡಿದ ಅವರು ಭಾರತದ ಮೇಲೆ ದಾಳಿ ಮಾಡಿದ ವಿದೇಶಿಗರು ನಮ್ಮ ಜ್ಞಾನ, ದೇವಾಲಯ, ಸಂಪತ್ತು ಏನೇ ಕೊಳ್ಳೆ ಹೊಡೆದರೂ ನಮ್ಮ ಮೂಲ‌ ಅಸ್ಮಿತೆಯನ್ನು ನಾಶ ಮಾಡಲಾಗಲಿಲ್ಲ. ಆಹಾರ, ಆಯುರ್ವೇದ, ಆರೋಗ್ಯ ಸೇರಿ ಎಲ್ಲದರಲ್ಲಿಯೂ ನಮ್ಮದು ಶ್ರೇಷ್ಠ ಎಂದು ಅವರು ಹೇಳಿದರು. ಕಾಶೀಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹಾಗೂ ಚಿತ್ರಾಪುರ‌ ಮಠಾಧೀಶರಾದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ದಿವ್ಯಕರಕಮಲಗಳಿಂಸ ದೀಪ ಬೆಳಗಿಸಿ ವೇದಘೋಷಗಳೊಂದಿಗೆ ಸಮ್ಮೇಳನ ಉದ್ಘಾಟನೆಗೊಂಡಿತು.

ಸಮ್ಮೇಳನದಲ್ಲಿ ವಿಶ್ವ ಸಾರಸ್ವತ್ ಸಮ್ಮಾನ್ ಪುರಸ್ಕಾರವನ್ನು ಉದ್ಯಮಿ ಪ್ರಕಾಶ್ ಪೈ, 1971 ರ ಇಂಡೋ – ಪಾಕ್ ಯುದ್ಧ ಸೇನಾನಿ, ಕಾರ್ಗಿಲ್ ಯೋಧ ಮೇಜರ್ ಗಗನ್ ದೀಪ್ ಭಕ್ಷಿ, ಖ್ಯಾತ ಹಿನ್ನಲೆ ಗಾಯಕರಾದ ಸುಮನ್ ಕಲ್ಯಾಣಪುರ್ ಅವರಿಗೆ ನೀಡಿ ಗೌರವಿಸಲಾಯಿತು. ಸಾರಸ್ವತ್ ಯೂಥ್ ಐಕಾನ್ ಪ್ರಶಸ್ತಿಯನ್ನು ವಿಲಾಸ್ ನಾಯಕ್ ಅವರಿಗೆ ನೀಡಿ ಪುರಸ್ಕೃರಿಸಲಾಯಿತು.

ಉತ್ತರ ಪ್ರದೇಶದ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ನಿತಿನ್ ಗೋಕರ್ಣ, ಐಎಎಸ್ ಸಾರಸ್ವತ್ ಪರಂಪರೆಯ ಹಿರಿಮೆ – ನಡೆದು ಬಂದ‌ ದಾರಿ ವಿಷಯದಲ್ಲಿ ವಿಚಾರ ಮಂಡಿಸಿದರು. ಕಾಶೀ ವಿಶ್ವನಾಥ ದೇವಾಲಯದ ಇತಿಹಾಸ, ಅದರ ಇಂದಿನ ಭವ್ಯ ದರ್ಶನ, ಕಾಶೀಯ ಪರಂಪರೆ, ಸಾರಸ್ವತ ಮಠಗಳ ಚರಿತ್ರೆ, ಸಾರಸ್ವತ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲಿ ಸಾಧಿಸಿದ ಗರಿಮೆಯ ಕುರಿತು ಅವರು ಇತಿಹಾಸದ ಪುಟಗಳೊಂದಿಗೆ ಬೆಳಕು ಚೆಲ್ಲಿದರು.

ಮೇಜರ್ ಜೆ ಡಿ ಭಕ್ಷಿಯವರು ನಮ್ಮ ಮೇಲೆ ದಾಳಿ ಮಾಡಿದ ಪರಕೀಯರು ಇಂಡಸ್ ನಾಗರಿಕತೆಯೇ ಮಾನವನ ಉಗಮ ಎಂದು ಸುಳ್ಳು‌ ಪ್ರಚಾರ ಮಾಡಿರುವುದು ಒಪ್ಪಲು ಸಾಧ್ಯವಿಲ್ಲ. ಸರಸ್ವತಿ ನಾಗರಿಕತೇಯೇ ಅತ್ಯಂತ ಮೊದಲ ನಾಗರಿಕತೆ ಎಂದು ತಿಳಿಸಿದರು.

ಸಮ್ಮೇಳನದ ವೇದಿಕೆಯಲ್ಲಿ ವಿಶ್ವ ಸಾರಸ್ವತ್ ಫೆಡರೇಶನ್ ಅಧ್ಯಕ್ಷರಾದ ಪ್ರದೀಪ್ ಪೈ, ಕಾರ್ಯದರ್ಶಿ ಎ ಮಾಧವ್ ಕಾಮತ್, ಟ್ರಸ್ಟಿ ಸಿಎ ನಂದಗೋಪಾಲ್ ಶೆಣೈ, ಪ್ರಮುಖರಾದ ಸಿಎ ಜಗನ್ನಾಥ್ ಕಾಮತ್, ಕರ್ನಲ್ ಅಶೋಕ್ ಕಿಣಿ,‌ ಸಂಸ್ಕಾರ ಭಾರತಿಯ ದಿನೇಶ್ ಕಾಮತ್, ವಾಶಿ ದೀಪಕ್ ಪೈ, ಅಮಿತ್ ಪೈ, ಅಜಿತ್ ಪೈ ಉಪಸ್ಥಿತರಿದ್ದರು.

ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸಹಿತ ದೇಶದ ವಿವಿಧ ರಾಜ್ಯಗಳ ಸಾರಸ್ವತರು ಸಮ್ಮೇಳನದಲ್ಲಿ ಭಾಗವಹಿಸಿದರು. ನೂರಾರು ಕಾರ್ಯಕರ್ತರು ಅತಿಥಿ ಸತ್ಕಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಯೂತ್ ಆಫ್ ಜಿಎಸ್ ಬಿ ಚಾನೆಲ್ ನಲ್ಲಿ ಕಾರ್ಯಕ್ರಮದ ನೇರಪ್ರಸಾರವನ್ನು ದೇಶ, ವಿದೇಶದ ಅಸಂಖ್ಯಾತ ಸಾರಸ್ವತರು‌ ವೀಕ್ಷಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು