ಮುಜಾಫರ್ನಗರ: ಮುಜಾಫರ್ನಗರ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ 30 ವರ್ಷದ ದಲಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲಾಗಿದ್ದು, ಆಕೆಗೆ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶನಿವಾರ ಸಂಜೆ ಈ ಘಟನೆ ನಡೆದಿದ್ದು, ವಿಡಿಯೋವನ್ನು ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಸಂಬಂಧ ಎಲ್ಲಾ ಏಳು ಆರೋಪಿಗಳನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನುಜ್, ಕುಲದೀಪ್, ಅಂಕಿತ್, ರವಿ, ರಿಜ್ವಾನ್, ಚೋಟಾ ಮತ್ತು ಅಬ್ದುಲ್ ಎಂದು ಆರೋಪಿಗಳನ್ನು ಪೊಲೀಸರು ಗುರುತಿಸಿದ್ದಾರೆ.
ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ, ಆಕೆ ಹಸುಗಳಿಗೆ ಹುಲ್ಲು ತರಲೆಂದು ಹೊಲಕ್ಕೆ ಹೋಗಿದ್ದಳು. ಅಲ್ಲಿ ಆರೋಪಿಗಳು ತನಗೆ ಲೈಂಗಿಕ ಕಿರುಕುಳ ನೀಡಿದರು ಮತ್ತು ಬಂದೂಕು ತೋರಿಸಿ ತನ್ನ ಬಟ್ಟೆಗಳನ್ನು ಬಿಚ್ಚುವಂತೆ ಒತ್ತಾಯಿಸಿ ನಂತರ ವಿಡಿಯೋ ಮಾಡಿದ್ದಾರೆ ಎಂದು ದೂರಿದ್ದಾರೆ.