ತಮಿಳುನಾಡು: ಗ್ರಾಮಕ್ಕೆ ಲಗ್ಗೆಯಿಟ್ಟ ಕಾಡಾನೆಯೊಂದು ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನ ಬಲಿ ಪಡೆದ ದಾರುಣ ಘಟನೆ ರಾಜ್ಯ ಗಡಿಭಾಗ ಆನೇಕಲ್ ಗೆ ಹೊಂದಿಕೊಂಡಿರುವ ತಮಿಳುನಾಡಿನ ಅಣ್ಣಿಯಾಳ ಗ್ರಾಮದಲ್ಲಿ ನಡೆದಿದೆ.
ಅಣ್ಣಿಯಾಳ ಗ್ರಾಮದ ಆಶಾ ಕಾರ್ಯಕರ್ತೆ ವಸಂತ(37), ದಾಸರಪಲ್ಲಿ ವಾಸಿ ಅಶ್ವಥಮ್ಮ(40) ಕಾಡಾನೆ ದಾಳಿಗೆ ಬಲಿಯಾದ ದುರ್ದೈವಿಗಳಾಗಿದ್ದಾರೆ.
ಭಾನುವಾರ ಬೆಳಿಗ್ಗೆ ಅಣ್ಣಿಯಾಳು ಗ್ರಾಮಕ್ಕೆ ಬಂದ ಆನೆಯನ್ನು ಓಡಿಸಲು ಗ್ರಾಮಸ್ಥರು ಮುಂದಾಗಿದ್ದ ವೇಳೆ, ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಸೇರಿದಂತೆ ಮೂರು ಹಸುಗಳ ಮೇಲೆ ಕಾಡಾನೆ ದಾಳಿ ಮಾಡಿದೆ.
ಕಾಡಾನೆ ದಾಳಿಗೆ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಹಿನ್ನೆಲೆ ಅರಣ್ಯ ಇಲಾಖೆ ವಿರುದ್ದ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ತಳಿ ಶಾಸಕ ರಾಮಚಂದ್ರ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಕಾಡಾನೆ ಹಾವಳಿ ನಿಯಂತ್ರಿಸದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೃತ ಮಹಿಳೆಯರ ಸಾವಿಗೆ ತಲಾ 20 ಲಕ್ಷ ಪರಿಹಾರದ ಜೊತೆಗೆ ಮೃತರ ಕುಟುಂಬದವರಿಗೆ ಸರ್ಕಾರಿ ಉದ್ಯೋಗಕ್ಕೆ ಒತ್ತಾಯಿಸಿದರು. ರಸ್ತೆ ತಡೆ ಹಿನ್ನೆಲೆ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರ ಮನವೊಲಿಕೆ ಬಳಿಕೆ ಪ್ರತಿಭಟನೆ ವಾಪಸ್ ಪಡೆಯಲಾಯಿತು.