ಚೆನ್ನೈ: ಮಾಂಡೂಸ್ ಚಂಡಮಾರುತವು ರಾಜ್ಯಕ್ಕೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಮಿಳುನಾಡಿನ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ತಮಿಳುನಾಡಿನ ಚೆಂಗಲ್ಪಟ್ಟು, ಕಾಂಚೀಪುರಂ ಮತ್ತು ವಿಲ್ಲುಪುರಂ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕಡಲೂರು, ಮೈಲಾಡುತುರೈ, ನಾಗಪಟ್ಟಣಂ, ತಿರುವರೂರು, ತಂಜಾವೂರು ಮತ್ತು ಪುದುಕೊಟ್ಟೈ ಜಿಲ್ಲೆಗಳಿಗೆ ಗುರುವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಈ ಹವಾಮಾನ ವಿದ್ಯಮಾನದಿಂದಾಗಿ ಡಿಸೆಂಬರ್ ೯ ಮತ್ತು ೧೦ ರಂದು ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿತ್ತು.
ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಆಳವಾದ ವಾಯುಭಾರ ಕುಸಿತವು ಕ್ರಮೇಣ ಚಂಡಮಾರುತವಾಗಿ ತೀವ್ರಗೊಂಡು ಉತ್ತರ ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದ ಕರಾವಳಿಗಳಿಂದ ನೈರುತ್ಯ ಬಂಗಾಳ ಕೊಲ್ಲಿಯನ್ನು ತಲುಪುವ ಸಾಧ್ಯತೆಯಿದೆ.
ಈ ವಾಯುಭಾರ ಕುಸಿತದಿಂದಾಗಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕ್ಕಲ್ ಪ್ರದೇಶಗಳಲ್ಲಿ ಡಿಸೆಂಬರ್ 8 ರಿಂದ 10 ರವರೆಗೆ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.