ಜಮ್ಮು-ಕಾಶ್ಮೀರ: ಆವಂತಿಪೋರಾದಲ್ಲಿ ಭದ್ರತಾ ಪಡೆಯ ಎನ್ ಕೌಂಟರ್ ಗೆ ಇಬ್ಬರು ಉಗ್ರರು ಹತ್ಯೆಗೀಡಾಗಿರುವ ಘಟನೆ ಸೋಮವಾರ (ಜುಲೈ 11) ನಡೆದಿರುವುದಾಗಿ ಸೇನಾ ಮೂಲಗಳು ತಿಳಿಸಿವೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ವಂಡಕಾಪೋರಾದಲ್ಲಿ ಎನ್ ಕೌಂಟರ್ ನಡೆದಿದೆ. ಘಟನಾ ಸ್ಥಳದಲ್ಲಿ ಒಂದು ಅಮೆರಿಕ ನಿರ್ಮಿತ ರೈಫಲ್, ಒಂದು ಪಿಸ್ತೂಲ್ ಸೇರಿದಂತೆ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. ಭಾರತೀಯ ಸೇನೆ, ಪೊಲೀಸರು ಹಾಗೂ ಸಿಆರ್ ಪಿಎಫ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆ.
ಉಗ್ರರು ಅಡಗಿದ್ದಾರೆಂಬ ಮಾಹಿತಿ ಮೇರೆಗೆ ಶೋಧ ಕಾರ್ಯ ನಡೆಸುತ್ತಿದ್ದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರು ಸಾವಿಗೀಡಾಗಿದ್ದಾರೆಂದು ವರದಿ ವಿವರಿಸಿದೆ.