ನವದೆಹಲಿ: ಅದಾನಿ-ಹಿಂಡನ್ಬರ್ಗ್ ಪ್ರಕರಣ ಸಂಬಂಧ ನಿನ್ನೆ ಸರ್ವೋಚ್ಚ ನ್ಯಾಯಾಲಯ ವ್ಯಕ್ತಪಡಿಸಿದ ಅಭಿಪ್ರಾಯಗಳು ಅದಾನಿ ಗ್ರೂಪ್ ಮೇಲೆ ಹೂಡಿಕೆದಾರರ ವಿಶ್ವಾಸ ಮರಳುವಂತೆ ಮಾಡಿವೆ. ನಿನ್ನೆ ಕೋರ್ಟ್ ಬೆಳವಣಿಗೆ ಬಳಿಕ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಸಂಸ್ಥೆಗಳ ಷೇರುಗಳಿಗೆ ಬೇಡಿಕೆ ಶುರುವಾಗಿದೆ.
ಕಳೆದ ಒಂದೇ ದಿನ ಶೇ. 12ರಷ್ಟು ಷೇರುಬೆಲೆ ಹೆಚ್ಚಾಗಿದೆ. ಪರಿಣಾಮವಾಗಿ ಗೌತಮ್ ಅದಾನಿ ಹಾಗೂ ಅವರ ಇತರ ಕುಟುಂಬ ಸದಸ್ಯರ ಷೇರುಸಂಪತ್ತು ಗಣನೀಯವಾಗಿ ಹೆಚ್ಚಾಗಿದೆ. ಮುಕೇಶ್ ಅಂಬಾನಿ ಅವರ ಕುಟುಂಬದ ಸಂಪತ್ತನ್ನು ಅದಾನಿ ಫ್ಯಾಮಿಲಿ ಮೀರಿಸಿದೆ.
ಬಿಸಿನೆಸ್ ಸ್ಟಾಂಡರ್ಡ್ ಪತ್ರಿಕೆಯ ವರದಿ ಪ್ರಕಾರ ಗೌತಮ್ ಅದಾನಿ ಕುಟುಂಬದವರ ಷೇರು ಸಂಪತ್ತು 8.98 ಲಕ್ಷ ಕೋಟಿ ರೂ ಇದ್ದದ್ದು ಕಳೆದ ಒಂದೇ ದಿನಕ್ಕೆ 9.37 ಲಕ್ಷ ಕೋಟಿ ರೂಗೆ ಏರಿದೆ. ಅದೇ ವೇಳೆ, ಮುಕೇಶ್ ಅಂಬಾನಿ ಕುಟುಂಬದ ಷೇರುಸಂಪತ್ತು 9.38 ಲಕ್ಷ ಕೋಟಿ ರೂ ಇದ್ದದ್ದು 9.28 ಲಕ್ಷ ಕೋಟಿ ರೂಗೆ ಇಳಿದಿದೆ. ಈ ಮೂಲಕ ಅದಾನಿ ಫ್ಯಾಮಿಲಿ ಭಾರತದ ಅತಿಶ್ರೀಮಂತ ಪ್ರೊಮೋಟರ್(ಸಂಸ್ಥೆಯ ಮಾಲೀಕರು) ಎನಿಸಿದೆ.