ಬಿಹಾರ್ : ಬಿಹಾರದ ಬಂಕಾ ಜಿಲ್ಲೆಯ ರಾಜಾವರ್ ಗ್ರಾಮದಲ್ಲಿ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಒಂದೇ ಕುಟುಂಬದ ಐವರು ಮಕ್ಕಳು ಮೃತಪಟ್ಟ ಘಟನೆ ನಡೆದಿದೆ.
ಎಲ್ಪಿಜಿ ಸಿಲಿಂಡರ್ ಸ್ಫೋಟದಿಂದ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಆದರೆ ಪೊಲೀಸರು ಅದನ್ನು ಇನ್ನೂ ದೃಢಪಡಿಸಿಲ್ಲ. ಸ್ಥಳದಲ್ಲಿ ಒಂದು ಸುಟ್ಟು ಕರಕಲಾಗಿರುವ ಸಿಲಿಂಡರ್ ಗ್ಯಾಸ್ ಮತ್ತು ರೆಗ್ಯುಲೇಟರ್ ಸಿಕ್ಕಿದೆ.
ರಾಜಾವರ್ ಗ್ರಾಮದ ಅಂಕುಶ್ ಕುಮಾರ್ (10), ಶಿವಾನಿ ಕುಮಾರಿ (9), ಸೋನಿ ಕುಮಾರಿ (8), ಸೀಮಾ ಕುಮಾರಿ (5) ಮತ್ತು ಅಂಶುಕುಮಾರಿ(10) ಮೃತಪಟ್ಟ ದುರ್ದೈವಿಗಳು.ಅಶೋಕ್ ಪಸ್ವಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮನೆಯಲ್ಲಿರುವ ಎಲ್ಲ ವಸ್ತುಗಳೂ ಸುಟ್ಟು ಬೂದಿಯಾಗಿದೆ ಎಂದು ಬಂಕಾ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.