ಪಾಟ್ನಾ: ಬಿಹಾರದ ಮಾಧೇಪುರ ಜಿಲ್ಲೆಯ ಬ್ರಹ್ಮದೇವ್ ಮಂಡಲ್ ಎಂಬ 84 ವರ್ಷ ವಯಸ್ಸಿನ ವೃದ್ಧರೊಬ್ಬರು 11 ಬಾರಿ ಕೋವಿಡ್-19 ಲಸಿಕೆ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಮಾಧೇಪುರ ಜಿಲ್ಲೆಯ ಒರಾಯ್ ಗ್ರಾಮದ ಮಂಡಲ್ ಅವರು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 12ನೇ ಬಾರಿ ಲಸಿಕೆ ಪಡೆಯುವ ಪ್ರಯತ್ನದಲ್ಲಿದ್ದಾಗ ಅವರನ್ನು ವಶಕ್ಕೆ ಪಡೆಯಲಾಗಿದೆ.
ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿ ಎಂದು ಹೇಳಿಕೊಂಡಿರುವ ಮಂಡಲ್, 2021ರ ಫೆಬ್ರುವರಿ 13ರಂದು ಮೊದಲ ಡೋಸ್ ಪಡೆದಿದ್ದರು.
ಎಂಟು ಬಾರಿ ತಮ್ಮ ಆಧಾರ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ನೀಡಿದ್ದಾಗಿ ಹಾಗೂ ಮೂರು ಬಾರಿ ಮತದಾರರ ಗುರುತಿನ ಪತ್ರ ಹಾಗೂ ಪತ್ನಿಯ ಮೊಬೈಲ್ ನಂಬರ್ ನೀಡಿದ್ದಾಗಿ ಮಂಡಲ್ ಹೇಳಿಕೊಂಡಿದ್ದಾರೆ. ಪ್ರತಿ ಲಸಿಕಾ ಡೋಸ್ ಪಡೆದಾಗಲೂ ಯಾವ ಸಮಸ್ಯೆಯೂ ಆಗಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಮ್ಮ ನಿಕಟ ಸಂಬಂಧಿಗಳ ಬೇರೆ ಬೇರೆ ಗುರುತಿನ ಪತ್ರ ಮತ್ತು ಮೊಬೈಲ್ ನಂಬರ್ಗಳನ್ನು ಬಳಸಿ ಆರೋಗ್ಯ ಕಾರ್ಯಕರ್ತರನ್ನು ವಂಚಿಸಿದ್ದರು ಎಂದು ಹೇಳಲಾಗಿದೆ.ಈ ಹೇಳಿಕೆ ಬೆನ್ನಲ್ಲೇ ರಾಜ್ಯದ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಮಾರ್ಚ್, ಮೇ, ಜೂನ್, ಜುಲೈ ಮತ್ತು ಆಗಸ್ಟ್ನಲ್ಲಿ ಲಸಿಕೆ ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ. ಸೆಪ್ಟೆಂಬರ್ನಲ್ಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಇತರ ದಾಖಲೆಗಳನ್ನು ಪ್ರಸ್ತುತಪಡಿಸಿ ಮೂರು ಬಾರಿ ಲಸಿಕೆ ಪಡೆದಿದ್ದಾರೆ. ಡಿಸೆಂಬರ್ 30ರ ವೇಳೆಗೆ 11 ಬಾರಿ ಲಸಿಕೆ ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ.
ಹಲವು ಡೋಸ್ಗಳನ್ನು ಪಡೆಯಲು ಕಾರಣವೇನು ಎಂಬ ಪ್ರಶ್ನೆಗೆ “ಸರ್ಕಾರ ಅದ್ಭುತ ಲಸಿಕೆಯ ವ್ಯವಸ್ಥೆ ಮಾಡಿದೆ” ಎಂದು ಪ್ರತಿಕ್ರಿಯಿಸಿದ್ದಾರೆ. “ಈ ಪ್ರತಿಪಾದನೆಯ ಸತ್ಯಾಂಶವನ್ನು ತಿಳಿಯಲು ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ, ಇಷ್ಟೊಂದು ಬಾರಿ ಕೋವಿಡ್ ಲಸಿಕೆ ಪಡೆಯಲು ಹೇಗೆ ಸಾಧ್ಯವಾಯಿತು ಎನ್ನುವುದು ತನಿಖೆಯಿಂದ ತಿಳಿಯಲಿದೆ” ಎಂದು ಸಿವಿಲ್ ಸರ್ಜನ್ ಡಾ.ಅಮರೇಂದ್ರ ಪ್ರತಾಪ್ ಶಾಹಿ ಹೇಳಿದ್ದಾರೆ.