ಭಾರತಕ್ಕೆ ಬರುವ ವಿದೇಶಿ ಪ್ರಯಾಣಿಕರ ಮೇಲೆ ವಿಧಿಸಲಾಗಿದ್ದ ಕ್ವಾರಂಟೈನ್ ನಿಯಮಗಳು ಇಂದಿನಿಂದ ಸಡಿಲಿಕೆಯಾಗಲಿದೆ.
ಈ ಮೂಲಕ ವಿದೇಶಿ ಪ್ರಯಾಣಿಕರು ವಿಮಾನ ನಿಲ್ದಾಣಗಳಿಂದ ನೇರವಾಗಿ ಮನೆಗೆ ತೆರಳಬಹುದಾಗಿದೆ. ಹೋಂ ಕ್ವಾರಂಟೈನ್ ನಿಬಂಧನೆಗಳಿಗೂ ಒಳಗಾಗಬೇಕಿಲ್ಲ. ಆದರೆ ಕೋವಿಡ್-19 ಆರ್ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ತೋರಿಸುವುದು ಕಡ್ಡಾಯವಾಗಿದೆ.
ಕಳೆದ ಫೆಬ್ರವರಿಯ ನಂತರ ಈ ಸಂಬಂಧ ಹೊರಡಿಸಲಾಗಿದ್ದ ಎಲ್ಲ ಆದೇಶಗಳೂ ಇನ್ನು ಅನೂರ್ಜಿತವಾಗಲಿದ್ದು, ಕಳೆದ ಬುಧವಾರ ಕೇಂದ್ರ ಹೊರಡಿಸಿರುವ ಹೊಸ ನಿಯಮಗಳು ಚಾಲ್ತಿಯಲ್ಲಿರಲಿದೆ.
ವಿದೇಶಿ ಪ್ರಯಾಣಿಕರಿಗೆ ಅನ್ವಯವಾಗುವ ನಿಯಮಗಳು..
- ಕೋವಿಡ್ ಲಸಿಕೆಯ ಒಂದು ಡೋಸ್ ಪಡೆದವರು ಅಥವಾ ಲಸಿಕೆಯೇ ಪಡೆಯದ ವಿದೇಶಿ ಪ್ರಯಾಣಿಕರು ಕೋವಿಡ್ ಪರೀಕ್ಷೆಯ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ.
- ಇಂಥವರು ಏಳು ದಿನ ಹೋಂ ಕ್ವಾರಂಟೈನ್ನಲ್ಲಿದ್ದು, 8ನೇ ದಿನ ಕೋವಿಡ್ ತಪಾಸಣೆ ಮಾಡಿಕೊಳ್ಳಬೇಕು.
- ವಿಮಾನಯಾನ ಕಂಪನಿಗಳ ಸಿಬ್ಬಂದಿ, ಬಂದರು ಹಾಗೂ ಭೂ ಗಡಿಗಳಲ್ಲಿ ವಿದೇಶಗಳೊಂದಿಗೆ ಸಂಪರ್ಕ ಇರಿಸಿಕೊಳ್ಳುವವರಿಗೂ ಈ ನಿಯಮ ಅನ್ವಯವಾಗಲಿದೆ.
- ವಿಮಾನ ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡುವಾಗಲೇ ಏರ್ ಸುವಿಧಾ ಪೋರ್ಟಲ್ ಮೂಲಕ ಪ್ರಯಾಣಿಕರು ತಮ್ಮ ಆರ್ಟಿ-ಪಿಸಿಆರ್ ವರದಿಯನ್ನು ಸಲ್ಲಿಸಬೇಕು.
- ಪ್ರಯಾಣ ಆರಂಭಿಸುವ 72 ಗಂಟೆಗಳ ಮೊದಲು ಈ ಪರೀಕ್ಷೆ ನಡೆದಿರಬೇಕು.
- ಸಲ್ಲಿಸಿರುವ ಮಾಹಿತಿ ತಪ್ಪಾಗಿದ್ದರೆ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದು ಎಂಬ ಮುಚ್ಚಳಿಕೆಯನ್ನೂ ಪ್ರಯಾಣಿಕರು ಬರೆದುಕೊಡಬೇಕಾಗುತ್ತದೆ.
- ಕೋವಿಡ್ ಸೋಂಕಿತರ ಸಂಖ್ಯೆ ತಗ್ಗಿರುವ ದೇಶದಿಂದ ಬರುವವರು 14 ದಿನಗಳ ಕಾಲ ಆರೋಗ್ಯದ ಮೇಲೆ ಸ್ವಯಂ ನಿಗಾ ಇರಿಸಿಕೊಳ್ಳಬೇಕು.
- ಕೋವಿಡ್ ಲಕ್ಷಣಗಳು ಕಾಣಿಸಿದರೆ ತಕ್ಷಣ ಸ್ವಯಂ ಕ್ವಾರಂಟೈನ್ಗೆ ಒಳಪಟ್ಟು ಚಿಕಿತ್ಸೆ ಪಡೆದುಕೊಳ್ಳಬೇಕು.