ಮುಂಬೈ: ದೋಣಿಯೊಂದು ಮುಳುಗಿ ಕನಿಷ್ಠ 11 ಮಂದಿ ನೀರುಪಾಲಾಗಿರುವ ಘಟನೆ ಮಹಾರಾಷ್ಟ್ರದ ಅಮರಾವತಿಯ ವರದಾ ನದಿಯಲ್ಲಿ ನಡೆದಿದೆ.
ಪೋಲಿಸ್ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ತಂಡಗಳು ಈವರೆಗೆ ನದಿಯಿಂದ ಅಪ್ರಾಪ್ತ ಬಾಲಕಿ ಸೇರಿದಂತೆ ಮೂರು ಮೃತದೇಹಗಳನ್ನು ಹೊರತೆಗೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೆನೊಡಾ ಪೊಲೀಸ್ ಠಾಣೆ ವ್ಯಾಪ್ತಿಯ ಹತ್ರಾಣ ಗ್ರಾಮದಲ್ಲಿ ಬೆಳಗ್ಗೆ 10: 30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಮೂರು ಕುಟುಂಬಗಳ 11 ಜನರನ್ನು ಹೊತ್ತ ದೋಣಿ ಮಗುಚಿ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ದೋಣಿಯಲ್ಲಿ ಹೆಚ್ಚು ಜನರು ಪ್ರಯಾಣಿಸಿದ್ದರಿಂದ ತೂಕ ಹೆಚ್ಚಾಗಿ ದೋಣಿ ಮುಳುಗಿರುವ ಸಾಧ್ಯತೆ ಇದೆ. ಅವರು ನದಿಯ ದಡದಲ್ಲಿ ಧಾರ್ಮಿಕ ಕ್ರಿಯೆ ಮಾಡಿದ ನಂತರ ದೋಣಿಯಲ್ಲಿ ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.