ಟಿಸಿಎಸ್ : ದೇಶದ ಅತಿ ದೊಡ್ಡ ಸಾಫ್ಟ್ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಉದ್ಯೋಗ ಹುಡುಕುತ್ತಿರುವ ಪ್ರತಿಭಾವಂತ ಮಹಿಳೆಯರಿಗೆ ದೊಡ್ಡ ಆಫರ್ ನೀಡಿದೆ. ಐಟಿ ವೃತ್ತಿಯಲ್ಲಿ ಕನಿಷ್ಠ ಎರಡು ವರ್ಷವಾದರೂ ಅನುಭವ ಹೊಂದಿರು ಮಹಿಳೆಯರ ಅತಿ ದೊಡ್ಡ ನೇಮಕಾತಿಗೆ ಟಿಸಿಎಸ್ ಮುಂದಾಗಿದೆ.
‘ಪ್ರತಿಭಾವಂತ ಮತ್ತು ಸಾಮರ್ಥವುಳ್ಳ ಮಹಿಳೆಯರು ಯಾವಾಗಲೂ ಮತ್ತೊಬ್ಬರಿಗೆ ಸ್ಫೂರ್ತಿಯ ಚಿಲುಮೆಯಾಗಿರುತ್ತಾರೆ. ಅಂಥ ಪ್ರತಿಭಾವಂತ ಮಹಿಳೆಯರಿಗೆ ಇದು ಉತ್ತಮ ಅವಕಾಶ. ಈ ಆಫರ್ ಸದುಪಯೋಗ ಪಡೆದುಕೊಳ್ಳಿ ಮತ್ತು ಟಿಸಿಎಸ್ನೊಂದಿಗೆ ಪಾಲುದಾರಿಕೆದಾರರಾಗಿ’ ಎಂದು ಟಿಸಿಎಸ್ ಸಂಸ್ಥೆ ಹೇಳಿದೆ.
ಈ ವರ್ಷ ಜೂನ್ನಲ್ಲಿ ಟಿಸಿಎಸ್ 20,000 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದು, ಇದು ಮೂರು ತಿಂಗಳ ಅವಧಿಯಲ್ಲಿನ ಅತಿ ಹೆಚ್ಚು ನೇಮಕಾತಿಗಳಲ್ಲಿ ಒಂದಾಗಿದೆ. ಈ ಮೂಲಕ ಒಟ್ಟು ಟಿಸಿಎಸ್ ನ ಉದ್ಯೋಗಿಗಳ ಸಂಖ್ಯೆ 5 ಲಕ್ಷಕ್ಕಿಂತ ಹೆಚ್ಚಾಗಿದೆ.
ಟಿಸಿಎಸ್ ಪ್ರತಿ ವರ್ಷ 40,000 ಸಾವಿರಕ್ಕೂ ಹೆಚ್ಚು ಹೊಸಬರನ್ನು ನೇಮಿಸಿಕೊಳ್ಳುತ್ತಿದ್ದು, ಈ ವಿತ್ತೀಯ ವರ್ಷದಲ್ಲೂ ಟಿಸಿಎಸ್ 40,000 ಹೊಸಬರನ್ನು ನೇಮಕ ಮಾಡಿಕೊಳ್ಳುವ ಗುರಿ ಹೊಂದಿದೆ. ದೇಶದ ತಂತ್ರಜ್ಞಾನ ಉದ್ಯೋಗದಾತರ ಪಟ್ಟಿಯಲ್ಲಿ ಟಿಸಿಎಸ್ ಎರಡನೇ ಸ್ಥಾನದಲ್ಲಿದ್ದು, 5.37 ಲಕ್ಷ ಉದ್ಯೋಗಿಗಳೊಂದಿಗೆ ಅಕ್ಸೆಂಚರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
‘ಉದ್ಯೋಗಿಗಳು ಕೆಲಸವನ್ನು ಉಳಿಸಿಕೊಳ್ಳು ಹೆಣಗಾಡುತ್ತಿರುವ ಈ ಸಮಯದಲ್ಲಿ, ಹೊಸಬರನ್ನು ನೇಮಕಾತಿ ಮಾಡಿಕೊಳ್ಳುವ ಬದಲು, ಅನುಭವಿಗಳನ್ನು ನೇಮಿಸಿಕೊಂಡು ತರಬೇತಿ ನೀಡಿ, ಅವರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದರೆ ಕಂಪನಿಗೆ ಲಾಭವಿದೆ’ ಎಂದು ಸಿಒಒ ಎನ್. ಗಣಪತಿ ಸುಬ್ರಮಣ್ಯಂ ಹೇಳಿದ್ದಾರೆ.