ಲಕ್ನೋ: ಮಾಜಿ ಸೇನಾ ಮುಖ್ಯಸ್ಥ ಮತ್ತು ಮಾಜಿ ಕೇಂದ್ರ ಸಚಿವ ವಿಕೆ ಸಿಂಗ್ ವಿರುದ್ಧ ಮಾನಹಾನಿಕರ ವಿಷಯವನ್ನು ಯೂಟ್ಯೂಬ್ ಸುದ್ದಿ ಪೋರ್ಟಲ್‍ನಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ ಅದರ ಮಾಲೀಕನನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ರಾನ್ ಸಿಂಗ್ ಎಂದು ಗುರುತಿಸಲಾಗಿದೆ. ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸೆಪ್ಟೆಂಬರ್ 29 ರಂದು ರಾನ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಯೂಟ್ಯೂಬ್‍ನಲ್ಲಿ ಪ್ರಸಾರವಾದ ಮಾನಹಾನಿ ವಿಚಾರದಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನನ್ನ ಹೆಸರಿಗೆ ಕಳಂಕ ಬಂದಿದೆ ಎಂದು ದೂರಿನಲ್ಲಿ ಗಂಭೀರ ಆರೊಪ ಮಾಡಿದ್ದರು.
ತಮ್ಮ ವಿರುದ್ಧ ಪ್ರಸಾರವಾದ ಸುದ್ದಿ `ಆಧಾರರಹಿತ’ ಎಂದು ವಿಕೆ ಸಿಂಗ್ ಉಲ್ಲೇಖಿಸಿದ್ದರು. ಈ ಕೃತ್ಯವನ್ನು ಕ್ಷಮಿಸಲಾಗುವುದಿಲ್ಲ ಮತ್ತು ಇದು ನನ್ನ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದೇನೆ. ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದಿದ್ದರು.
ಆರೋಪಿ ವಿರುದ್ಧ ಬಿಎನ್‍ಎಸ್ ಸೆಕ್ಷನ್ 356 (ಮಾನನಷ್ಟ), 352 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 61 (2) (ಕ್ರಿಮಿನಲ್ ಪಿತೂರಿಯ) ಮತ್ತು ಐಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.