ಬ್ರೆಜಿಲ್: ಸೌಂದರ್ಯ ಸ್ಪರ್ಧೆಯಲ್ಲಿ ಮಗಳು 4ನೇ ಸ್ಥಾನ ಪಡೆದಳು ಅಂತ ತಂದೆಯೊಬ್ಬ ತೀರ್ಪುಗಾರರ ಮೇಲೆ ಗುಂಡು ಹಾರಿಸಿದ ವಿಲಕ್ಷಣ ಘಟನೆ ಬ್ರೆಜಿಲ್‌ನ ಅಲ್ಟಮಿರಾದಲ್ಲಿ ನಡೆದ ಪ್ರಾದೇಶಿಕ ಸೌಂದರ್ಯದಲ್ಲಿ ನಡೆದಿದೆ.
ಸ್ಪರ್ಧೆಯಲ್ಲಿ ತನ್ನ ಮಗಳು ಕೇವಲ 4ನೇ ಸ್ಥಾನ ಪಡೆದಿದ್ದರಿಂದ ಸ್ಪರ್ಧಿಯೊಬ್ಬರ ತಂದೆ ತೀರ್ಪುಗಾರರ ಮೇಲೆ ಗುಂಡು ಹಾರಿಸಿದ್ದಾನೆ. ಕೊನೆಗೇ ತಾನೇ ದುರಂತ ಅಂತ್ಯ ಕಂಡಿದ್ದಾನೆ. ಜುಲೈ 28 ರಂದು ಅಲ್ಟಾಮಿರಾ ನಗರದಲ್ಲಿ ನಡೆದ ‘ಬೈಲೆ ದ ಎಸ್ಕೊಲ್ಹಾ ಡ ರೈನ್ಹಾ’ ಸೌಂದರ್ಯ ಸ್ಪರ್ಧೆಯ ನಂತರ ಈ ಘಟನೆ ನಡೆದಿದೆ. ಸ್ಪರ್ಧೆ ಮುಗಿದ ಸುಮಾರು ಒಂದೆರಡು ಗಂಟೆಗಳ ನಂತರ, ಸ್ಪರ್ಧಿಯೊಬ್ಬರ ತಂದೆ ಸೆಬಾಸ್ಟಿಯಾವೊ ಫ್ರಾನ್ಸಿಸ್ಕೊ ಎಂಬಾತ ತಮ್ಮ ಮಗಳು ಸ್ಪರ್ಧೆಯಲ್ಲಿ 4ನೇ ಸ್ಥಾನ ಗಳಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾನೆ.
ತೀರ್ಪುಗಾರರ ನಿರ್ಧಾರ ಮತ್ತು ಮಾನದಂಡಗಳನ್ನು ಪ್ರಶ್ನಿಸಿದ್ದಾನೆ. ಒಂದು ಹಂತದಲ್ಲಿ ಗನ್ ತೆಗೆದುಕೊಂಡು ತೀರ್ಪುಗಾರರ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಿದ್ದಾನೆ. ವರದಿ ಪ್ರಕಾರ ಫ್ರಾನ್ಸಿಸ್ಕೊ ತನ್ನ ಮಗಳು ಸೌಂದರ್ಯ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದ್ದಕ್ಕೆ ಅವಮಾನಿತನಾಗಿದ್ದ. ತೀರ್ಪುಗಾರರ ವಿವರಣೆಯಿಂದ ಅತೃಪ್ತನಾದ ಆತ ಅವರ ಮೇಲೆ ಗುಂಡು ಹಾರಿಸಿದ್ದಾನೆ.
ಘಟನೆ ನಡೆದಾಗ ಸಭಾಂಗಣದಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಸೌಂದರ್ಯ ಸ್ಪರ್ಧೆ ನಡೆದ ಸ್ಥಳದಲ್ಲಿ ಖಾಸಗಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಭದ್ರತೆ ಒದಗಿಸಿದ್ದರು. ಘಟನೆ ಅರಿತ ಪೊಲೀಸರು ಹೆಚ್ಚಿನ ಅನಾಹುತ ತಡೆಗೆ ಅವನ ಮೇಲೆ ಗುಂಡು ಹಾರಿಸಿದ್ದಾರೆ. ತೀವ್ರ ಗಾಯಗೊಂಡ ಫ್ರಾನ್ಸಿಸ್ಕೋ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.