ಕುವೈಟ್: ಉದ್ಯೋಗ ಅರಸಿ ಕುವೈಟ್‌ಗೆ ಹೋಗಿದ್ದ ಆಂಧ್ರಪ್ರದೇಶ ಮೂಲದ ಮಹಿಳೆಯೊಬ್ಬಳನ್ನು ವ್ಯಕ್ತಿಯೊಬ್ಬ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾಗಿ ಆರೋಪಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಕವಿತಾ ಕುವೈಟ್‌ನಿಂದ ವಿಡಿಯೋ ಮಾಡಿ, ಆಂಧ್ರಪ್ರದೇಶದ ಸಚಿವ ರಾಮ್ ಪ್ರಸಾದ್ ರೆಡ್ಡಿ ಅವರಲ್ಲಿ ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ನನಗೆ ಇಲ್ಲಿ ಚಿತ್ರಹಿಂಸೆ ನೀಡಲಾಗುತ್ತಿದೆ. ನನಗೆ ಇಬ್ಬರು ಮಕ್ಕಳು, ವಿಕಲಚೇತನ ಪತಿ ಊರಲ್ಲಿ ಇದ್ದಾರೆ. ಇವರನ್ನು ಸಾಕುವ ಹೊಣೆಯಿಂದ ಉದ್ಯೋಗಕ್ಕಾಗಿ ಕುವೈಟ್‌ಗೆ ಬಂದಿದ್ದೆ. ಆದರೆ ಇಲ್ಲಿ ನನಗೆ ದಾರಿ ಕಾಣದಂತಾಗಿದೆ ಎಂದು ಗೋಳಾಡಿದ್ದಾರೆ.
ಕುವೈಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದ ವ್ಯಕ್ತಿ ಕವಿತಾಳನ್ನು ಕೋಣೆಯಲ್ಲಿ ಕೂಡಿ ಹಾಕಿ, ಊಟ ನೀಡದೆ ಗೃಹಬಂಧನದಲ್ಲಿ ಇಟ್ಟಿರುವುದಾಗಿ ಆರೋಪಿಸಿದ್ದಾಳೆ. ಆಕೆಯ ಟ್ರಾವೆಲ್ ಏಟೆಂಟ್ ಆಕೆಗೆ ಬೆದರಿಕೆಯೊಡ್ಡಿ, ಫೋನ್ ಅನ್ನು ಬ್ಲಾಕ್ ಮಾಡಿ ಕುಟುಂಬಸ್ಥರೊಂದಿಗೆ ಮಾತನಾಡದಂತೆ ಕಿರುಕುಳ ನೀಡುತ್ತಿರುವುದಾಗಿ ತಿಳಿಸಿದ್ದಾಳೆ.
ಇದೀಗ ವಿಡಿಯೋ ಸಚಿವ ರಾಮ್ ಪ್ರಸಾದ್ ರೆಡ್ಡಿ ಅವರಿಗೆ ತಲುಪಿದ್ದು, ಈ ಬಗ್ಗೆ ಕೇಂದ್ರ ಸಚಿವ ಕೊಂಡಪಲ್ಲಿ ಶ್ರೀನಿವಾಸ್ ಅವರಿಗೆ ಪತ್ರ ಬರೆದು ಕವಿತಾ ಸುರಕ್ಷಿತವಾಗಿ ಕುವೈಟ್‌ನಿಂದ ಭಾರತಕ್ಕೆ ಮರಳಲು ನೆರವು ಮಾಡಬೇಕಾಗಿ ಮನವಿ ಮಾಡಿದ್ದಾರೆ.