ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಮತ್ತೆ ನೆತ್ತರು ಹರಿದಿದೆ. ಪಾಕ್ ಪಂಜಾಬ್ ಪ್ರಾಂತ್ಯದ ಕನಿಷ್ಠ 7 ಕಾರ್ಮಿಕರನ್ನ ಪ್ರತ್ಯೇಕತಾವಾದಿ ಉಗ್ರರ ಗುಂಪು ಹತ್ಯೆ ಮಾಡಿರುವುದಾಗಿ ಭಾನುವಾರ ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಮುಲ್ತಾನ್‌ನ ಕಾರ್ಮಿಕರು ಶನಿವಾರ ತಡರಾತ್ರಿ ಪಂಜ್‌ಗುರ್ ಪಟ್ಟಣದ ಖುದಾ-ಎ-ಅಬದಾನ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯೊಂದರಲ್ಲಿ ಮಲಗಿದ್ದರು. ಈ ವೇಳೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಬಲೂಚಿಸ್ತಾನ್ ಪೊಲೀಸ್ ಮಹಾನಿರೀಕ್ಷಕ ಮೊವಾಝಮ್ ಜಾ ಅನ್ಸಾರಿ ತಿಳಿಸಿದ್ದಾರೆ.
ಶಸ್ತ್ರ ಸಜ್ಜಿನ ಭಯೋತ್ಪಾದಕರು ನಿರ್ಮಾಣ ಹಂತದಲ್ಲಿರುವ ಮನೆಗೆ ನುಗ್ಗಿದಾಗ ಕಾರ್ಮಿಕರು ಗಾಢ ನಿದ್ರೆಯಲ್ಲಿದ್ದರು. ಈ ವೇಳೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಮನಬಂದಂತೆ ಗುಂಡಿನ ದಾಳಿ ನಡೆಸಿದರು. ಈ ವೇಳೆ ಗಂಭೀರ ಗಾಯಗೊಂಡಿದ್ದ ಓರ್ವ ಕಾರ್ಮಿಕ ಮಾತ್ರ ಬಚಾವ್ ಆಗಿದ್ದಾನೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, ಬಲೂಚಿಸ್ತಾನ ಮುಖ್ಯಮಂತ್ರಿ ಮೀರ್ ಸರ್ಫ್ರಾಜ್ ಬುಗ್ತಿ ಅವರಿಂದ ವರದಿ ಘಟನೆ ಕುರಿತು ವರದಿ ಕೇಳಿದ್ದಾರೆ. ಬಲೂಚಿಸ್ತಾನದಲ್ಲಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಿ ಎಂದು ಸಹ ತಿಳಿಸಿದ್ದಾರೆ.