ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದ ಹಿನ್ನೆಲೆ ವಿದೇಶಗಳಿಗೆ ತಡೆಹಿಡಿಯಲಾಗಿದ್ದ ಲಸಿಕೆ ರಫ್ತನ್ನು ಈಗ ಕೇಂದ್ರ ಸರ್ಕಾರ ಮತ್ತೆ ಪ್ರಾರಂಭಿಸಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವೀಯ, ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಲಸಿಕೆ ಲಭ್ಯವಾಗುತ್ತಿರುವ ಕಾರಣ ಅಗತ್ಯವಿರುವ ದೇಶಗಳಿಗೆ ರಫ್ತು ಮಾಡಲು ತೀರ್ಮಾನಿಸಲಾಗಿದೆ ಎಂದರು.
ಈ ತಿಂಗಳಿನಲ್ಲಿ ಸ್ಥಳೀಯ ಉತ್ಪಾದಕರಿಂದ 26 ಕೋಟಿ ಡೋಸ್ ಕೊರೋನಾ ಲಸಿಕೆ ಸಿಗಲಿದ್ದು, ಅಕ್ಟೋಬರ್ ತಿಂಗಳಿನಲ್ಲಿ 30 ಕೋಟಿ ಡೋಸ್ ಗಳ ಲಸಿಕೆ ಲಭ್ಯವಾಗಲಿದೆ. ಮುಂದಿನ ಮೂರು ತಿಂಗಳ ಅಂತರದಲ್ಲಿ ಒಟ್ಟು 100 ಕೋಟಿ ಲಸಿಕೆ ಸಿಗಲಿದೆ. ದೇಶದಲ್ಲಿನ ಅಗತ್ಯತೆಗಳನ್ನು ಪರಿಗಣಿಸಿ ಉಳಿದ ಡೋಸ್ ಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ ಎಂದು ತಿಳಿಸಿದರು.
ಭಾರತ ಈಗಾಗಲೇ 6.63 ಕೋಟಿ ಡೋಸ್ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡಿದೆ.