ಫ್ರಾನ್ಸ್ : 1950ನೇ ಇಸ್ವಿಯಿಂದಲೂ ಫ್ರಾನ್ಸ್ ನ ಕ್ಯಾಥೊಲಿಕ್ ಚರ್ಚ್ ನಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ತನಿಖೆ ನಡೆಸುತ್ತಿರುವ ಆಯೋಗ ಹಲವು ಬೆಚ್ಚಿಬೀಳಿಸುವ ಸಂಗತಿಗಳನ್ನು ಹೊರಹಾಕುತ್ತಿದೆ. ಚರ್ಚ್ ಪಾದ್ರಿಗಳು ಹಾಗೂ ಉನ್ನತ ಅಧಿಕಾರಿಗಳಿಂದ 2 ಲಕ್ಷಕ್ಕೂ ಅಧಿಕ ಮಕ್ಕಳು ಈವರೆಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಆಯೋಗ ಹೇಳಿದೆ.
ಕಳೆದ 70 ವರ್ಷಗಳಲ್ಲಿ ಅಲ್ಲಿನ ಕ್ಯಾಥೊಲಿಕ್ ಚರ್ಚ್ ನ ಪಾದ್ರಿಗಳು ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ಬಗ್ಗೆ ಚರ್ಚ್ ಕಳೆದ ಹಲವಾರು ವರ್ಷಗಳಿಂದ ಕಣ್ಣುಮುಚ್ಚಿ ಕುಳಿತಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಮಕ್ಕಳ ಮೇಲಿನ ಈ ದೌರ್ಜನ್ಯದ ಬಗ್ಗೆ ಚರ್ಚ್ ಉದಾಸೀನತೆ ಮೆರದಿದ್ದು, ಈ ಬಗ್ಗೆ ಕೇಳಿಬರುತ್ತಿರುವ ನಿಂದನೆಗಳಿಂದ ತನ್ನನ್ನು ರಕ್ಷಿಸಿಕೊಳ್ಳುತ್ತಿದೆ ಎಂದು ಆಯೋಗದ ಮುಖ್ಯಸ್ಥ ಜೀನ್ ಮಾರ್ಕ್ ಸಾವೆ ಕಿಡಿಕಾರಿದ್ದಾರೆ.
ಈ ಚರ್ಚ್ ಗಳಲ್ಲಿ ಲೈಂಗಿಕ ದೌರ್ಜನ್ಯ ಕೇವಲ ಹೆಣ್ಣುಮಕ್ಕಳ ಮೇಲೆಯಲ್ಲ. ಬದಲಿಗೆ 10-13 ವರ್ಷದೊಳಗಿನ ಗಂಡು ಮಕ್ಕಳ ಮೇಲೂ ಕಾಮುಕರ ಕೆಟ್ಟ ದೃಷ್ಟಿ ವಕ್ಕರಿಸಿದೆ. ರೋಮನ್ ಕ್ಯಾಥೊಲಿಕ್ ಚರ್ಚ್ನ ಈ ಲೈಂಗಿಕ ಹಗರಣಗಳು ಜಗತ್ತಿನಾದ್ಯಂತ ನಡೆಯುತ್ತಿದ್ದು, ಇದರಲ್ಲಿ ಮಕ್ಕಳ ಲೈಂಗಿಕ ಶೋಷಣೆ ಹೆಚ್ಚಾಗಿದೆ. ಕಳೆದ 20 ವರ್ಷಗಳಲ್ಲಿ ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ಹೆಚ್ಚಾಗಿ ವರದಿ ಆಗುತ್ತಿದ್ದು, 1950ರಿಂದ ಈ ವರಗೆ ಲೈಂಗಿಕ ದೌರ್ಜನ್ಯದಲ್ಲಿ ಭಾಗಿಯಾಗಿರುವ ಪಾದ್ರಿಗಳು ಮತ್ತು ಚರ್ಚ್ ಅಧಿಕಾರಿಗಳ ಸಂಖ್ಯೆ 3000.