News Karnataka Kannada
Friday, April 12 2024
Cricket
ವಿದೇಶ

ಹೈಕಮಾಂಡ್‌ ಕೇಳಿದರೆ ರಾಜೀನಾಮೆ; ರಾಜಕೀಯ ಸಂಚಲನ ಸೃಷ್ಟಿಸಿದ ಸಿಎಂ ಯಡಿಯೂರಪ್ಪ

Photo Credit :

ಹೈಕಮಾಂಡ್‌ ಕೇಳಿದರೆ ರಾಜೀನಾಮೆ; ರಾಜಕೀಯ ಸಂಚಲನ ಸೃಷ್ಟಿಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ‘ಪಕ್ಷದ ಹೈಕಮಾಂಡ್‌ನ ವಿಶ್ವಾಸ ಇರುವವರೆಗೂ ಮುಖ್ಯಮಂತ್ರಿ ಹುದ್ದೆಯಲ್ಲಿರುವೆ. ಹೈಕಮಾಂಡ್‌ ಸೂಚಿಸಿದ ತಕ್ಷಣ ರಾಜೀನಾಮೆ ನೀಡಲು ಸಿದ್ಧ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.
ಡಿ. ದೇವರಾಜ ಅರಸು ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅರಸು ಪ್ರತಿಮೆಗೆ ಭಾನುವಾರ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ‘ಹೈಕಮಾಂಡ್‌ ನನ್ನ ಮೇಲೆ ವಿಶ್ವಾಸ ಇಟ್ಟಿದೆ. ಪಕ್ಷದ ವರಿಷ್ಠರು ಎಷ್ಟು ದಿನಗಳ ಕಾಲ ನನ್ನ ಮೇಲೆ ವಿಶ್ವಾಸ ಇಟ್ಟು ಮುಂದುವರಿಯಿರಿ ಎನ್ನುತ್ತಾರೋ ಅಲ್ಲಿಯವರೆಗೂ ಇರುತ್ತೇನೆ. ಈ ವಿಚಾರದಲ್ಲಿ ನಾನು ಗೊಂದಲದಲ್ಲಿ ಇಲ್ಲ’ ಎಂದರು.‘ನೀವು ಬೇಡ ಎಂದು ಹೈಕಮಾಂಡ್‌ ಹೇಳಿದ ದಿನವೇ ರಾಜೀನಾಮೆ ಸಲ್ಲಿಸಿ, ರಾಜ್ಯದ ಅಭಿವೃದ್ಧಿಗಾಗಿ ಹಗಲು ರಾತ್ರಿ ಕೆಲಸ ಮಾಡುತ್ತೇನೆ. ನನಗೆ ಅವಕಾಶ ಕೊಟ್ಟಿದ್ದಾರೆ. ಅದನ್ನು ಶಕ್ತಿಮೀರಿ ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಉಳಿದದ್ದು ಹೈಕಮಾಂಡ್‌ಗೆ ಬಿಟ್ಟದ್ದು’ ಎಂದು ಯಡಿಯೂರಪ್ಪ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ‘ಪರ್ಯಾಯ ನಾಯಕರು ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ. ರಾಜ್ಯದಲ್ಲಿ, ದೇಶದಲ್ಲಿ ಪರ್ಯಾಯ ವ್ಯಕ್ತಿಗಳು ಯಾವಾಗಲೂ ಇದ್ದೇ ಇರುತ್ತಾರೆ’ ಎಂದರು.

ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆಯ ಕುರಿತು ಬಿಜೆಪಿಯಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಚಟುವಟಿಕೆಗಳು ನಡೆಯುತ್ತಿವೆ. ಯಡಿಯೂರಪ್ಪ ವಿರೋಧಿ ಬಣದ ಶಾಸಕರು ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಹೈಕಮಾಂಡ್‌ ಮೇಲೆ ಒತ್ತಡ ತರುವ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ. ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಮಾಡಿ ಬಂದಿದ್ದ ಸಚಿವ ಸಿ.ಪಿ. ಯೋಗೇಶ್ವರ್‌, ಮುಖ್ಯಮಂತ್ರಿ ವಿರುದ್ಧವೇ ಹೇಳಿಕೆ ನೀಡಿದ್ದರು. ಶಾಸಕಾಂಗ ಪಕ್ಷದ ಸಭೆ ನಡೆಸಬೇಕೆಂಬ ಒತ್ತಡವೂ ಬಿಜೆಪಿಯಲ್ಲಿ ಹೆಚ್ಚಲಾರಂಭಿಸಿತ್ತು. ಜೂನ್‌ 7 ರ ಬಳಿಕ ಶಾಸಕಾಂಗ ಪಕ್ಷದ ಸಭೆ ನಡೆಸುವಂತೆ ಪಕ್ಷದ ವರಿಷ್ಠರು ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ ಎಂಬ ಸುದ್ದಿಯೂ ಇತ್ತು. ಅದರ ಬೆನ್ನಲ್ಲೇ ದೆಹಲಿಗೆ ತೆರಳಿದ್ದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಹಲವು ನಾಯಕರನ್ನು ಭೇಟಿಮಾಡಿ ಬಂದಿದ್ದರು.ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ, ಮುಖ್ಯಮಂತ್ರಿ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
‘ಕೋವಿಡ್‌ ಸಂಕಷ್ಟದ ಸಮಯದಲ್ಲಿಯೂ ಯಡಿಯೂರಪ್ಪ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರಿಂದ ರಾಜೀನಾಮೆ ಕೊಡಿಸುವ ಯಾವ ಉದ್ದೇಶವೂ ಪಕ್ಷಕ್ಕಿಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
‘ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮಾಧ್ಯಮಗಳಲ್ಲಿ ಪದೇ ಪದೇ ಚರ್ಚೆ ನಡೆದ ಕಾರಣದಿಂದ ಅವರು ಆ ರೀತಿ ಹೇಳಿಕೆ ಕೊಟ್ಟಿರಬಹುದು. ‘ನಾನು ರಾಜೀನಾಮೆ ಕೊಟ್ಟು ಮನೆಗೆ ಹೋಗುತ್ತೇನೆ’ ಎಂದು ಅವರು ಎಲ್ಲಿಯೂ ಹೇಳಿಲ್ಲ. ಪಕ್ಷ ಹೇಳಿದ ಹಾಗೆ ಕೇಳುತ್ತೇನೆ ಎನ್ನುವುದಷ್ಟೇ ಅವರ ಮಾತಿನ ಅರ್ಥ. ಹೈಕಮಾಂಡ್‌ನಿಂದ ಅವರಿಗೆ ಯಾವುದೇ ರೀತಿಯ ಸೂಚನೆ ಬಂದಿಲ್ಲ’ ಎಂದರು.
‘ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಚರ್ಚೆಯೇ ನಡೆದಿಲ್ಲ. ನಮ್ಮ ಸರ್ವಸಮ್ಮತ ನಾಯಕ ಯಡಿಯೂರಪ್ಪ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಪುನರುಚ್ಛರಿಸಿದರು. ‘ಒಬ್ಬ ಕಾರ್ಯಕರ್ತನಾಗಿ, ಪಕ್ಷದ ವರಿಷ್ಠರ ಸೂಚನೆಗೆ ಬದ್ಧನಾಗಿರುವುದಾಗಿ ಯಡಿಯೂರಪ್ಪ ಹೇಳಿರುವುದು ಎಲ್ಲರಿಗೂ ಆದರ್ಶ’ ಎಂದರು.‘ಪಕ್ಷದಲ್ಲಿ ಆಂತರಿಕವಾಗಿ ಯಾವುದೇ ಬಂಡಾಯವಿಲ್ಲ. ನೋವು, ಅಸಮಾಧಾನ ಇದ್ದರೆ ಮಾತುಕತೆ ನಡೆಸಲು ತಿಳಿಸಲಾಗಿದೆ. ಸರ್ಕಾರ ನಡೆಸುವಾಗ ಇಂತಹ ಸಣ್ಣಪುಟ್ಟ ಸಮಸ್ಯೆಗಳು ಇರುತ್ತವೆ’ ಎಂದು ಹೇಳಿದರು.
‘ರಾಜಕಾರಣದಲ್ಲಿ ನಾನಾ ತಂತ್ರಗಾರಿಕೆಗಳಿರುತ್ತವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆ ಕುರಿತ ಹೇಳಿಕೆಯ ಹಿಂದೆಯೂ ಬೇರೆಯದೇ ತಂತ್ರಗಾರಿಕೆ ಇದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು. ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಯಡಿಯೂರಪ್ಪ ಅವರನ್ನು ಬದಲಿಸುವ ನಿರ್ಧಾರ ಅವರ ಪಕ್ಷಕ್ಕೆ ಸಂಬಂಧಿಸಿದ್ದು. ನಮಗೂ ಅದಕ್ಕೂ ಸಂಬಂಧ ಇಲ್ಲ. ಆದರೆ, ನನ್ನ ಪ್ರಕಾರ ಯಡಿಯೂರಪ್ಪ ಗಟ್ಟಿ ಮನುಷ್ಯ, ಅಷ್ಟು ಸಲೀಸಾಗಿ ಜಗ್ಗಲ್ಲ’ ಎಂದರು.‘ಯಡಿಯೂರಪ್ಪ ಅವರ ಹೇಳಿಕೆಯನ್ನು 2–3 ರೀತಿಯಲ್ಲಿ ವಿಶ್ಲೇಷಿಸಬಹುದು. ನನ್ನನ್ನು ಮುಟ್ಟಿ ನೋಡಿ ಎಂಬ ಎಚ್ಚರಿಕೆ ಇರಬಹುದು. ನಾನು ಶಿಸ್ತಿನ ಸಿಪಾಯಿ ಎಂದೂ ಇರಬಹುದು’ ಎಂದರು. ‘ರಾಜ್ಯ ಹಾಗೂ ಬಿಜೆಪಿ ರಾಜಕಾರಣದಲ್ಲಿ ಯಡಿಯೂರಪ್ಪ ಅವರು ಗಟ್ಟಿ ನಾಯಕ. ಅವರ ನಾಯಕತ್ವದಲ್ಲಿ ಚುನಾವಣೆ ನಡೆದಿದೆ. ಅವರ ನಾಯಕತ್ವದಲ್ಲೇ ನಮ್ಮ ಪಕ್ಷದ ಸ್ನೇಹಿತರನ್ನು ಕರೆದುಕೊಂಡು ಹೋಗಿ, ಬಿಜೆಪಿ ಸರ್ಕಾರ ಮಾಡಿದ್ದಾರೆ. ಜನ ಒಪ್ಪುವುದು ಬಿಡುವುದು ಬೇರೆ ವಿಚಾರ. ವಿರೋಧ ಪಕ್ಷವಾಗಿ ನಾವು ಏನು ಬೇಕಾದರೂ ಹೇಳಬಹುದು’ ಎಂದರು.‘ಆಡಳಿತ ವೈಫಲ್ಯ, ಆಂತರಿಕ ಬಿಕ್ಕಟ್ಟು, ಏಳೆಂಟು ನಾಯಕರು ತಾವೇ ಮುಖ್ಯಮಂತ್ರಿ ಆಗಬೇಕು ಎಂದು ಸಿದ್ಧವಾಗಿದ್ದಾರೆ. ಯಡಿಯೂರಪ್ಪನವರೇ ಮುಖ್ಯಮಂತ್ರಿ ಎನ್ನುವವರು ಕೂಡಾ ತಾವೇ ಸೂಟ್ ಹೊಲಿಸಿ, ಮುಹೂರ್ತ ಇಟ್ಟುಕೊಂಡು ಸಿದ್ಧವಾಗಿದ್ದಾರೆ’ ಎಂದರು.
ಯಡಿಯೂರಪ್ಪ ಅವರ ಮನಸ್ಸಿಗೆ ನೋವಾದಂತೆ ಕಾಣುತ್ತಿದೆ. ಅದಕ್ಕಾಗಿ ಅವರು ಈ ರೀತಿ ಮಾತನಾಡಿರಬಹುದು’ ಎಂದು ಕಂದಾಯ ಸಚಿವ ಆರ್‌. ಅಶೋಕ ಹೇಳಿದರು. ‘ನಾಯಕತ್ವ ಬದಲಾವಣೆ ಇಲ್ಲ ಎಂದು ಪಕ್ಷದ ವರಿಷ್ಠರು ಈಗಾಗಲೇ ಹೇಳಿದ್ದಾರೆ. ಸಚಿವ ಸಿ.ಪಿ. ಯೋಗೇಶ್ವರ್ ಕೂಡ ಯಡಿಯೂರಪ್ಪ ಅವರೇ ನಾಯಕ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಯಡಿಯೂರಪ್ಪ ಅವರು 40 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಸಮರ್ಥವಾಗಿ ಸರ್ಕಾರ ಮುನ್ನಡೆಸುತ್ತಿದ್ದಾರೆ. ಅವರ ಕಡೆ ಯಾರೂ ಬೆರಳು ತೋರಿಸಲು ಸಾಧ್ಯವಿಲ್ಲ’ ಎಂದರು.
‘ಯಡಿಯೂರಪ್ಪ ನಾಯಕತ್ವದ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್‌ಗೆ ಗೊಂದಲವಿಲ್ಲ. ನಾವು ಕೂಡ ಅವರ ನಾಯಕತ್ವದಲ್ಲೇ ಬಂದಿದ್ದೇವೆ. ಮುಂದೆಯೂ ಇರುತ್ತೇವೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
‘ಪಕ್ಷದ ಹೈಕಮಾಂಡ್‌ ಸಂಪೂರ್ಣವಾಗಿ ಯಡಿಯೂರಪ್ಪ ಪರವಾಗಿದೆ. ಆದರೂ, ಕೆಲವರು ನಾಯಕತ್ವ ಬದಲಾವಣೆಯ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ನೋವು ಇರುವುದು ಅವರೊಂದಿಗೆ ಇತ್ತೀಚೆಗೆ ಮಾತನಾಡುವಾಗ ಗೊತ್ತಾಯಿತು. ಅಪಸ್ವರ ಎತ್ತಿರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.
ರಾಜೀನಾಮೆ ನೀಡುವುದಾಗಿ ಯಡಿಯೂರಪ್ಪ ಅವರು ಎಲ್ಲಿಯೂ ಹೇಳಿಲ್ಲ. ಅವರ ಹೇಳಿಕೆಯನ್ನು ಸ್ಥಾನ ತ್ಯಜಿಸುತ್ತಾರೆ ಎಂದು ಅರ್ಥೈಸುವುದು ಬೇಡ’ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದರು.
‘ಅವರು ಯಾವ ದೃಷ್ಟಿಯಲ್ಲಿ ಈ ಹೇಳಿಕೆ ನೀಡಿದ್ದಾರೊ ಗೊತ್ತಿಲ್ಲ. ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ನಾನು, ಪಕ್ಷದ ನಿರ್ಣಯಕ್ಕೆ ಬದ್ಧ ಎಂದು ಅವರು ಹೇಳಿದ್ದಾರೆ. ಈಗ ಅವರು ನಮ್ಮ ಮುಖ್ಯಮಂತ್ರಿ. ಅವರೇ ಮುಂದುವರಿಯುತ್ತಾರೆ. ಈ ಬಗ್ಗೆ ಅನುಮಾನ ಬೇಡ’ ಎಂದರು. ಬದ್ಧ ಎಂದು ಅವರು ಹೇಳಿದ್ದಾರೆ. ಈಗ ಅವರು ನಮ್ಮ ಮುಖ್ಯಮಂತ್ರಿ. ಅವರೇ ಮುಂದುವರಿಯುತ್ತಾರೆ. ಈ ಬಗ್ಗೆ ಅನುಮಾನ ಬೇಡ. ಬಿಜೆಪಿ ‘ಕೇಡರ್‌’ ಆಧಾರಿತ ಪಕ್ಷ. ಇಂತಹ ವಿಚಾರಗಳಿಗೆ ಹೆಚ್ಚು ಮಹತ್ವ ನೀಡುವುದಿಲ್ಲ’ ಎಂದರು.
‘ಪಕ್ಷ ಸೂಚಿಸಿದರೆ ರಾಜೀನಾಮೆಗೆ ಸಿದ್ಧ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಹಿರಂಗ ಹೇಳಿಕೆ ನೀಡಿರುವುದು ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿಯಲು ದಾರಿಯಾಗಬಹುದು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ‘ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ಕುರಿತು ಆರು ತಿಂಗಳಿನಿಂದಲೂ ಚರ್ಚೆ ನಡೆಯುತ್ತಿದೆ. ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ ಎಂಬುದಕ್ಕೆ ಮೈಸೂರು ಪ್ರಕರಣ ಸಾಕ್ಷಿ. ಮುಖ್ಯಮಂತ್ರಿಯೇ ಹೀಗೆ ಬಹಿರಂಗ ಹೇಳಿಕೆ ನೀಡಿದರೆ ಆಡಳಿತ ಇನ್ನಷ್ಟು ದುರ್ಬಲಗೊಳ್ಳುತ್ತದೆ’ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು