News Karnataka Kannada
Wednesday, April 17 2024
Cricket
ವಿದೇಶ

ಸೋಮವಾರ ಸೂರ್ಯನ ಸುತ್ತ ಕಾಣಿಸಿಕೊಂಡ ಉಂಗುರದ ಸುತ್ತ …..

Photo Credit :

ಸೋಮವಾರ ಸೂರ್ಯನ ಸುತ್ತ ಕಾಣಿಸಿಕೊಂಡ ಉಂಗುರದ  ಸುತ್ತ .....

ಮೇ 24ರಂದು ಸೂರ್ಯನ ಸುತ್ತ ವಿಸ್ಮಯಕಾರಿ ಉಂಗುರ ನೋಡಿ ಅನೇಕ ಮಂದಿ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಾಟ್ಸಾಪ್ ಸ್ಟೇಟಸ್, ಇನ್ಸ್ಟಾ ರೀಲು, ಫೇಸ್ಬುಕ್ ಸ್ಟೇಟಸ್, ಸ್ಟೋರಿಯಲ್ಲಿ ಇದು ಸೂರ್ಯನದ್ದೇ ಸದ್ದು. ಸದ್ಯಕ್ಕೆ ಇನ್ನೂ ನಮ್ಮ ಜ್ಯೋತಿಷಿಗಳ ಕಣ್ಣಿಗೆ ಬಿದ್ದಿಲ್ಲ. ಇಲ್ಲದಿದ್ದರೆ ಈ ವೇಳೆಗೆ ಎಲ್ಲಾ ಚಾನೆಲ್ ಗಳಲ್ಲೂ ಇದು ಸೂರ್ಯ ನಮ್ಮ ಮೇಲೆ ಬೀರಿರುವ ವಕ್ರದೃಷ್ಟಿ.. ಈ ರಾಶಿಯವರಿಗೆ ಕಷ್ಟ, ಆ ರಾಶಿಯವರಿಗೆ ಶುಭ ಎಂದು ಶಾಸ್ತ್ರ ಓದುತ್ತಿದ್ದರು..
ಇಷ್ಟಕ್ಕೂ ಸೂರ್ಯ ಸುತ್ತಾ ಕಾಮನಬಿಲ್ಲಿನಂಥ ಈ ಸುಂದರ ಉಂಗುರ ಮೂಡಿದ್ದಾದರೂ ಏಕೆ? ಇದರಿಂದ ಪ್ರಕೃತಿಯಲ್ಲಿ ಏನಾದರೂ ಬದಲಾವಣೆಯಾಗುತ್ತದೆಯೇ? ಇದು ಅಪಾಯದ ಮುನ್ಸೂಚನೆಯೆ? ಎಂಬುದಕ್ಕೆ ಈಗಾಗಲೇ ಅನೇಕ ವೈಜ್ಞಾನಿಕ ವಿಶ್ಲೇಷಣೆಗಳು ಗೂಗಲ್ ಮಾಡಿದರೆ ಸಿಗುತ್ತದೆ. ಮೊಟ್ಟ ಮೊದಲ ಎಚ್ಚರಿಕೆ ಎಂದರೆ, ಸೂರ್ಯ ಸುತ್ತ ಉಂಗುರ ವಿರಲಿ, ಇಲ್ಲದಿರಲಿ, ಬರಿಗಣ್ಣಿನಿಂದ ದಿಟ್ಟಿಸಿ ನೋಡಬೇಡಿ, ಯುವಿ ಕಿರಣಗಳು ನಿಮ್ಮ ಕಣ್ಣು ಹಾಳು ಮಾಡುತ್ತವೆ. ಇನ್ನೂ ಸನ್ ಹ್ಯಾಲೋ ಉಂಗುರದ ರೀತಿಯೇ ಕಾಣಿಸಬೇಕು ಎಂದೇನಿಲ್ಲ, ಲೈಟ್ ಕಂಬದ ರೀತಿ ಲಂಬವಾಗಿ, ಸೂರ್ಯನ ಮೇಲೆ ಪ್ರಭೆಯಂತೆ ನೇರವಾಗಿ ಕಾಣಿಸಬಹುದು.
ಇಲ್ಲ, ಸೂರ್ಯ, ಚಂದ್ರ ಎರಡರ ಸುತ್ತ ಈ ರೀತಿ ಉಂಗುರವನ್ನು ಕಾಣಬಹುದು. ಇದನ್ನು ಉಂಗುರ ಅನ್ನುವುದರ ಬದಲು halo ಎಂದು ಕರೆಯಲಾಗುತ್ತದೆ. ಮಳೆಗಾಲಕ್ಕೂ ಮುನ್ನ ಈ ರೀತಿ ಉಂಗುರ ವಿನ್ಯಾಸ ಕಾಣಿಸಬಹುದು. ಮಳೆಹನಿಯ ಕಣಗಳು, ಮಂಜಿನಿಂದ ಕೂಡಿದ ಕಣಗಳೇ ತುಂಬಿದ ಮೋಡಗಳು ಒಗ್ಗೂಡಿದಾಗ ಆಗುವ prism effect ನಿಂದ ಸಂಭವಿಸುವ ಖಗೋಳ ವಿದ್ಯಮಾನ ಇದಾಗಿದೆ. ಇದು ಈ ದಿನ ಅಚ್ಚರಿ, ವಿಸ್ಮಯ ಅಲ್ಲವೇ ಅಲ್ಲ, ಈ ಹಿಂದೆಯೂ ಕಂಡು ಬಂದಿತ್ತು. ಇನ್ಮುಂದೆಯೂ ಕಾಣಬಹುದು. ತನ್ನ ಸುತ್ತ ಇರುವ ಮಂಜಿನ ಕಣಗಳ ಮೇಲೆ ಸೂರ್ಯ ಬೀರುವ ಕಿರಣಗಳು ಕಾಮನ ಬಿಲ್ಲಿನ ಬಣ್ಣದ ರೀತಿ ಕಾಣಿಸುವಂತೆ ಮಾಡುತ್ತವೆ. ಇದಕ್ಕೆ ವಕ್ರೀಭವನ(refraction) ಕ್ರಿಯೆ ಕಾರಣ. ಆದರೆ, ಸೂರ್ಯ ಸುತ್ತ ಕಾಣುವ ಉಂಗುರ ಕಾಮನಬಿಲ್ಲಲ್ಲ.
ಸೂರ್ಯನ ಸುತ್ತಾ ಈ ರೀತಿ ಉಂಗುರ ಕಾಣಿಸಿಕೊಂಡರೆ ಭಾರಿ ಮಳೆ ಬರುವ ಮುನ್ಸೂಚನೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಸೂರ್ಯನಿಂದ 22 ಡಿಗ್ರಿಯಲ್ಲಿ ಉಂಟಾಗಿರುವ ಈ 22 ಡಿಗ್ರಿ ಹ್ಯಾಲೋ ಉಂಟಾಗುವುದಕ್ಕೆ ಮಂಜಿನ ಕಣಗಳು ಉಂಗುರ ವಿನ್ಯಾಸದಲ್ಲಿ ಕಾಣಿಸಿಕೊಳ್ಳಲಿ ಬಿಡಲಿ, ಮಳೆ ಬೀಳಲು ಕಾರ್ಮೋಡಗಳು ಅಗತ್ಯ ಎಂದು ಸಾಮಾನ್ಯ ವಿಜ್ಞಾನ ತಿಳಿದವರಿಗೆ ಅರಿವಿರುತ್ತದೆ. ಹೀಗಾಗಿ, ಈ ರೀತಿ ಉಂಗುರದ ಸೂರ್ಯ ಕಾಣಿಸಿಕೊಂಡ ತಕ್ಷಣಕ್ಕೆ ಯಾವ ಮಳೆಯೂ ಬೀಳುವುದಿಲ್ಲ. ಇನ್ನು ಕಾಮನಬಿಲ್ಲು ಬರುವುದು, ಬಿಸಿಲು ಮಳೆ ಬಿದ್ದಾಗ ಎಂಬುದು ತಿಳಿದಿದೆಯಷ್ಟೇ.
ಕಾಮನಬಿಲ್ಲಿನಂತೆ ಕಾಣುವ ಈ ಉಂಗುರದಲ್ಲಿ ಕಾಮನಬಿಲ್ಲಿನಲ್ಲಿ ಕಾಣುವ ಎಲ್ಲಾ ಬಣ್ಣಗಳು ಕಾಣಿಸುವುದಿಲ್ಲ. ಉಂಗುರದ ಸೂರ್ಯನ ಸುತ್ತಾ ಹೆಚ್ಚೆಂದರೆ ಕೆಂಪು, ಹಳದಿ, ಬೂದು ಬಣ್ಣ ಕಾಣಿಸಿದರೆ ಹೆಚ್ಚು. ಇನ್ನು ಕಾಮನಬಿಲ್ಲು ಅರ್ಧ ಚಂದ್ರಾಕೃತಿಯಲ್ಲಿ ಮಾತ್ರ ಕಾಣಿಸುತ್ತದೆ. ಸೂರ್ಯನ ಸುತ್ತಲಿರುವ ಉಂಗುರದ ಒಳಭಾಗದಲ್ಲಿ ಕೆಂಪು ಮತ್ತು ಹೊರಭಾಗದಲ್ಲಿ ನೀಲಿ ಬಣ್ಣ ಕಾಣಿಸುತ್ತದೆ. ಪ್ರತಿಬಾರಿ ಮಂಜಿನ ಮೋಡಗಳು ಸೃಷ್ಟಿಯಾದಾಗ ಈ ಉಂಗುರಗಳು ಕಾಣಿಸುವುದಿಲ್ಲ, ಬಿಸಿಲು ಮಳೆ ಬಿದ್ದರೆ ಕಾಮನಬಿಲ್ಲು ನಿರೀಕ್ಷಿಸಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು