News Karnataka Kannada
Saturday, April 13 2024
Cricket
ವಿದೇಶ

ರಾಜಕೀಯ ಪಕ್ಷಗಳಿಗೆ ಸಲಹೆ ನೀಡುವ ಕೆಲಸಕ್ಕೆ ಗುಡ್​ಬೈ ಹೇಳಿದ ಪ್ರಶಾಂತ್ ಕಿಶೋರ್

Photo Credit :

ರಾಜಕೀಯ ಪಕ್ಷಗಳಿಗೆ ಸಲಹೆ ನೀಡುವ ಕೆಲಸಕ್ಕೆ ಗುಡ್​ಬೈ ಹೇಳಿದ ಪ್ರಶಾಂತ್ ಕಿಶೋರ್

ದೆಹಲಿ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ತೃಣಮೂಲ) ಜಯಗಳಿಸಿದ ನಂತರ ಎಲ್ಲರ ಗಮನ ಟಿಎಂಸಿಗೆ ಚುನಾವಣಾ ಕಾರ್ಯತಂತ್ರದ ಸಲಹೆ ನೀಡಿದ ಪ್ರಶಾಂತ್ ಕಿಶೋರ್ ಅವರ ಮೇಲೆ ನೆಟ್ಟಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯನ್ನು ಗೆಲುವಿನ ದಡ ಮುಟ್ಟಿಸಿದ ನಂತರ ರಾಜಕೀಯ ಪಕ್ಷಗಳಿಗೆ ಕಾರ್ಯತಂತ್ರ ರೂಪಿಸಿಕೊಡುವ ವೃತ್ತಿಯಿಂದ ದೂರ ಹೋಗುವುದಾಗಿ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
‘ನಾನು ಈಗ ಮಾಡುತ್ತಿರುವ ಕೆಲಸ ಮುಂದುವರಿಸಲು ನನಗೆ ಯಾವುದೇ ಅಸಕ್ತಿಯಿಲ್ಲ. ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಇದು ನನಗೆ ತುಸು ಬಿಡುವು ತೆಗೆದುಕೊಳ್ಳುವ ಮತ್ತು ಬದುಕಿನಲ್ಲಿ ಬೇರೆ ಏನನ್ನಾದರೂ ಮಾಡುವ ಸಮಯ. ನಾನು ಈ ಕೆಲಸವನ್ನು ಬಿಡಬೇಕು ಎಂದುಕೊಂಡಿದ್ದೇನೆ’ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
‘ಇಷ್ಟು ದಿನ ಬೇರೆಯವರ ರಾಜಕೀಯ ಜೀವನ ರೂಪಿಸಿಕೊಡುತ್ತಿದ್ದ ನೀವು, ಪ್ರತ್ಯಕ್ಷವಾಗಿ ರಾಜಕೀಯಕ್ಕೆ ಸೇರ್ಪಡೆಯಾಗುವ ಉದ್ದೇಶ ಹೊಂದಿದ್ದೀರಾ’ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ರಾಜಕಾರಿಣಿಯಾಗಿ ವಿಫಲನಾದವನು. ನಾನು ಮತ್ತೆ ಅದೇ ಕೆಲಸಕ್ಕೆ ಹಿಂದಿರುಗಲಾರೆ’ ಎಂದು ಹೇಳಿದರು.ಪಶ್ಚಿಮ ಬಂಗಾಳ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಮೇಲ್ನೋಟಕ್ಕೆ ಇದು ಏಕಮುಖ ಫಲಿತಾಂಶ ಎನಿಸಬಹುದು. ಟಿಎಂಸಿ ಸುಲಭವಾಗಿ ಗೆದ್ದಿದೆ ಎಂದು ದೇಶದ ಇತರ ಭಾಗಗಳಲ್ಲಿ ಭಾವನೆ ಬರಬಹುದು. ಆದರೆ ವಾಸ್ತವವಾಗಿ ಇದು ತೀವ್ರ ಜಿದ್ದಾಜಿದ್ದಿ ನಡೆದ ಚುನಾವಣೆ. ಪಕ್ಷಪಾತ ಧೋರಣೆಯ ಚುನಾವಣಾ ಆಯೋಗವು ಟಿಎಂಸಿ ಸೋಲಬೇಕೆಂದು ಬಯಸಿತ್ತು. ನಾವು ಪ್ರಚಾರ ನಡೆಸುವುದಕ್ಕೂ ಸಾಕಷ್ಟು ಅಡೆತಡೆಗಳನ್ನು ತಂದೊಡ್ಡಿತ್ತು. ನಾವು ಗೆಲ್ಲುತ್ತೇವೆ ಎಂಬ ಬಗ್ಗೆ ವಿಶ್ವಾಸವಿತ್ತು. ಜನರು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಕ್ಷೇತ್ರಗಳನ್ನು ತೃಣಮೂಲ ಕಾಂಗ್ರೆಸ್ ಗೆದ್ದಿದೆ. ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಲಿದೆ ಎಂಬ ಕಥನವನ್ನು ಪ್ರಬಲವಾಗಿ ಕಟ್ಟಿ ದೇಶವನ್ನು ನಂಬಿಸಿತ್ತು. ಆದರೆ ಫಲಿತಾಂಶದ ದಿನದ ಬಗ್ಗೆ ನಮಗೆ ಭರವಸೆಯಿತ್ತು’ ಎಂದು ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಸೇರಿದಂತೆ ಇಡೀ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯರು ಎನ್ನುವುದರಲ್ಲಿ ಎರಡು ಮಾತಿಲ್ಲ. ಮೋದಿಯ ಜನಪ್ರಿಯತೆ ಪ್ರತಿ ಚುನಾವಣೆಯಲ್ಲಿಯೂ ಬಿಜೆಪಿಗೆ ಗೆಲುವುದು ತಂದುಕೊಡಬಲ್ಲದು ಎಂದು ಅರ್ಥವಲ್ಲ ಎಂದು ಪ್ರಶಾಂತ್ ಕಿಶೋರ್ ವಿಶ್ಲೇಷಿಸಿದರು.ಕಳೆದ ಡಿಸೆಂಬರ್​ನಲ್ಲಿ ಪ್ರಶಾಂತ್ ಕಿಶೋರ್ ಮಾಡಿದ್ದ ಟ್ವೀಟ್​ ಒಂದು ಇದೀಗ ಮತ್ತೆ ವೈರಲ್ ಆಗಿದೆ. ‘ಈ ಟ್ವೀಟ್ ಸೇವ್ ಮಾಡಿಕೊಳ್ಳಿ. ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಎರಡಂಕಿ ದಾಟಲು ಕಷ್ಟಪಡುತ್ತೆ. ಬಿಜೆಪಿಯು ಅದಕ್ಕಿಂತ ಉತ್ತಮ ಸಾಧನೆ ಮಾಡಿದರೆ ನಾನು ಈ ಕ್ಷೇತ್ರದಿಂದ ದೂರಾಗುತ್ತೇನೆ’ ಎಂದು ಡಿಸೆಂಬರ್ 21ರಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದರು.
ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯವರ್ಗೀಯ ಪ್ರತಿಕ್ರಿಯಿಸಿ, ‘ಬಂಗಾಳದಲ್ಲಿ ಬಿಜೆಪಿಯ ಸುನಾಮಿ ಗಮನಿಸಿ. ಅಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶವು ಚುನಾವಣಾ ಕಾರ್ಯತಂತ್ರ ನಿಪುಣನನ್ನು ಕಳೆದುಕೊಳ್ಳಲಿದೆ’ ಎಂದು ವ್ಯಂಗ್ಯವಾಡಿದ್ದರು. ಟ್ವಿಟರ್​ನಲ್ಲಿ ಇಂದು ಪ್ರಶಾಂತ್​ ಕಿಶೋರ್​ರ ಹಳೆಯ ಹೇಳಿಕೆ ಮತ್ತೆ ಟ್ರೆಂಡ್ ಆಯಿತು. ಸಾಕಷ್ಟು ಜನರು ಅವರ ಹೇಳಿಕೆಯ ಸ್ಕ್ರೀನ್​ಶಾಟ್​ಗಳನ್ನು ಹಂಚಿಕೊಂಡಿದ್ದರು. ‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟಿದೆ. ಪ್ರಶಾಂತ್ ತಮ್ಮ ಮಾತಿಗೆ ಬದ್ಧರಾಗಿ ಉಳಿಯುತ್ತಾರೆಯೇ’ ಎಂದು ಕೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು