News Karnataka Kannada
Saturday, April 20 2024
Cricket
ವಿದೇಶ

ಮಗು ಕದ್ದವಳ ಪತ್ತೆಗೆ 35000 ಕರೆ ಪರಿಶೀಲನೆ ; 800 ಮಂದಿ ವಿಚಾರಣೆ

Photo Credit :

ಮಗು ಕದ್ದವಳ ಪತ್ತೆಗೆ 35000  ಕರೆ ಪರಿಶೀಲನೆ ;  800 ಮಂದಿ ವಿಚಾರಣೆ

ಬೆಂಗಳೂರು: ವರ್ಷದ ಹಿಂದೆ ನಡೆದಿದ್ದ ನವಜಾತ ಶಿಶು ಕಳ್ಳತನ ಪ್ರಕರಣವನ್ನು ಕೊನೆಗೂ ಭೇದಿಸಿರುವ ಬೆಂಗಳೂರು ಪೊಲೀಸರು 35 ಸಾವಿರಕ್ಕೂ ಅಧಿಕ ಮೊಬೈಲ್ ನಂಬರ್​ಗಳನ್ನು ಜಾಲಾಡಿ, 800 ಜನರನ್ನು ವಿಚಾರಣೆಗೊಳಪಡಿಸಿದ ಬಳಿಕ ಆರೋಪಿ ಮನೋವೈದ್ಯೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 2020ರ ಮೇ 29ರಂದು ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳುವಾಗಿತ್ತು. ಮಗುವನ್ನು ಒಯ್ದಿದ್ದ ಚಿಕ್ಕೋಡಿ ಮೂಲದ, ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ನೆಲೆಸಿರುವ ಮನೋವೈದ್ಯೆ ಡಾ.ರಶ್ಮಿ (34) ಅವರನ್ನು ಬಂಧಿಸಲಾಗಿದೆ. ಮಗುವನ್ನು ವಶಕ್ಕೆ ಪಡೆದು ಪಾಲಕರ ಮಡಿಲು ಸೇರಿಸಲಾಗಿದೆ.
15 ಲಕ್ಷ ರೂ. ವಸೂಲಿ: ಬಾಗಲಕೋಟೆಯ ರೈತ ದಂಪತಿಗೆ ಕೆಲ ವರ್ಷಗಳ ಹಿಂದೆ ಬುದ್ಧಿಮಾಂದ್ಯ ಮಗು ಜನಿಸಿತ್ತು. ಮಗುವಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಪಾಲಕರು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ಕರೆ ತಂದಿದ್ದರು. ಅಲ್ಲಿ ಮನೋವೈದ್ಯೆಯಾಗಿದ್ದ ಡಾ.ರಶ್ಮಿ ಮಗುವಿಗೆ ಚಿಕಿತ್ಸೆ ನೀಡುತ್ತಿದ್ದರು. ಇನ್ನೊಂದು ಮಗುವಿಗೆ ಪ್ರಯತ್ನಪಟ್ಟರೂ ಮಗುವಾಗಿರಲಿಲ್ಲ ಎಂಬ ನೋವನ್ನು ದಂಪತಿ ರಶ್ಮಿ ಬಳಿ ಹೇಳಿಕೊಂಡಿದ್ದರು. ಹಣದ ಆಸೆಗೆ ಬಿದ್ದ ವೈದ್ಯೆ ಬಾಡಿಗೆ ತಾಯಿ ಮೂಲಕ ನಿಮ್ಮದೇ ಮಗು ಕೊಡಿಸುವುದಾಗಿ ನಂಬಿಸಿ ದಂಪತಿಯ ಅಂಡಾಣು ಮತ್ತು ವೀರ್ಯಾಣು ಪಡೆದಿದ್ದರು. ಅದನ್ನು ಬೇರೊಬ್ಬ ಮಹಿಳೆಯ ಗರ್ಭಕ್ಕೆ ಸೇರಿಸಿ ಮಗು ಬೆಳೆಸುವುದಾಗಿ ಹೇಳಿ 15 ಲಕ್ಷ ರೂ. ಪಡೆದಿದ್ದರು.
ಬಳಿಕ ಯಾವುದೇ ಐವಿಎಫ್ ಪ್ರಕ್ರಿಯೆ ನಡೆಸದೆ ಬಾಡಿಗೆ ತಾಯಿಯನ್ನೂ ತೋರಿಸದೆ ನಿಮ್ಮ ಮಗು ಆರೋಗ್ಯವಾಗಿ ಬೆಳೆಯುತ್ತಿದೆ ಎಂದು ದಂಪತಿಗೆ ಸುಳ್ಳು ಹೇಳಿ ಕಳುಹಿಸುತ್ತಿದ್ದರು. 9 ತಿಂಗಳು ಕಳೆದ ಬಳಿಕ ದಂಪತಿಗೆ ಮಗು ಕೊಡಿಸುವುದು ಅನಿವಾರ್ಯವಾದಾಗ ಹೆರಿಗೆ ಆಸ್ಪತ್ರೆಯಿಂದ ಮಗು ಕದಿಯುವ ಸಂಚು ರೂಪಿಸಿದ್ದರು. ಅದರಂತೆ ಗೂಗಲ್​ನಲ್ಲಿ ಬೆಂಗಳೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಯ ಮಾಹಿತಿ, ವಿಳಾಸ ತಿಳಿದುಕೊಂಡು 2020ರ ಮೇ 27, 28ರಂದು ವಿವಿಧ ಆಸ್ಪತ್ರೆಗಳಿಗೆ ತೆರಳಿ ಆಗತಾನೆ ಜನಿಸಿದ ಶಿಶು ಕದಿಯಲು ವಿಫಲ ಯತ್ನ ನಡೆಸಿದ್ದರು. ಜೆಜೆ ಆರ್ ನಗರದ ನಿವಾಸಿ ನವೀದ್ ಪಾಷಾ ತನ್ನ ಪತ್ನಿ ಹುಸ್ನಾ ಭಾನು ಅವರನ್ನು ಹೆರಿಗೆಗೆಂದು ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಗೆ ದಾಖಲಿಸಿದ್ದರು. ಮೇ 29ರಂದು ಬೆಳಗ್ಗೆ 7.51ಕ್ಕೆ ಇವರಿಗೆ ಗಂಡು ಮಗು ಜನಿಸಿತ್ತು. ಅದೇ ದಿನ ಬೆಳಗ್ಗೆ 11 ಗಂಟೆಗೆ ಈ ಆಸ್ಪತ್ರೆಗೆ ಬಂದ ರಶ್ಮಿ ನರ್ಸ್ ಬಳಿ ಹೋಗಿ ತನ್ನನ್ನು ಮಗುವಿನ ಪಾಲಕರ ಸಂಬಂಧಿ ಎಂದು ಹೇಳಿ ಮಗುವನ್ನು ಪಡೆದುಕೊಂಡು ಆಟೋದಲ್ಲಿ ಪರಾರಿಯಾಗಿದ್ದರು. ನಂತರ ಬಾಗಲಕೋಟೆಯ ದಂಪತಿಗೆ ನಿಮ್ಮದೇ ಮಗು ಎಂದು ನಂಬಿಸಿ ಕೊಟ್ಟಿದ್ದರು. ಮಗುವನ್ನು ಕಳೆದುಕೊಂಡ ನವೀದ್ ಚಾಮರಾಜಪೇಟೆ ಠಾಣೆಯಲ್ಲಿ ದೂರು ನೀಡಿದ್ದರು.
ಹಣದ ಆಮಿಷಕ್ಕೆ ಕೃತ್ಯ: ಶಿಶುವನ್ನು ವೈದ್ಯೆಯಿಂದ ಪಡೆದುಕೊಂಡಿದ್ದ ದಂಪತಿ ತಮ್ಮ ಮಗುವೆಂದೇ ಭಾವಿಸಿದ್ದರು. ವೈದ್ಯೆ ರಶ್ಮಿಗೆ ವಿವಾಹವಾಗಿ ಇಬ್ಬರು ಮಕ್ಕಳಿದ್ದಾರೆ. ಹಣದ ಆಮಿಷಕ್ಕೊಳಗಾಗಿ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಸುಳಿವು ನೀಡಿದ ಗೂಗಲ್: ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ವಿಶೇಷ ತಂಡ ರಚಿಸಿ ಸ್ಥಳೀಯ ಸಿಸಿ ಕ್ಯಾಮರಾ, ಕರೆಗಳ ಪರಿಶೀಲನೆ ನಡೆಸಿದರೂ ಮಗುವಿನ ಸುಳಿವು ಸಿಕ್ಕಿರಲಿಲ್ಲ. ಟವರ್ ಲೊಕೇಶನ್ ಮೂಲಕ ಕಳೆದೊಂದು ವರ್ಷದಿಂದ ಪೊಲೀಸರು 35 ಸಾವಿರಕ್ಕೂ ಹೆಚ್ಚು ಮೊಬೈಲ್ ನಂಬರ್ ಟ್ರಾ್ಯಕ್ ಮಾಡಿದ್ದರು. ಅನುಮಾನ ಬಂದ ಪ್ರತಿ ನಂಬರನ್ನೂ ಕೂಲಂಕಷವಾಗಿ ಪರಿಶೀಲಿಸಿದಾಗ ಶಿಶು ಅಪಹರಣವಾದ ದಿನ ರಶ್ಮಿ ತಮ್ಮ ಮೊಬೈಲ್​ನಲ್ಲಿ ಗೂಗಲ್ ಮೂಲಕ ಹಲವು ಹೆರಿಗೆ ಆಸ್ಪತ್ರೆಗಳ ಮಾಹಿತಿ ಕಲೆ ಹಾಕಿರುವ ಸುಳಿವು ಸಿಕ್ಕಿತ್ತು. ಈ ಆಧಾರದ ಮೇಲೆ ಇತ್ತೀಚೆಗೆ ಅವರ ಚಲನವಲನ ಪರಿಶೀಲಿಸಿ ಮೇ 29ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಇವರು ಕೊಟ್ಟ ಮಾಹಿತಿ ಆಧರಿಸಿ ಬಾಗಲಕೋಟೆಗೆ ತೆರಳಿದ ಪೊಲೀಸರು ದಂಪತಿಯನ್ನು ಪತ್ತೆಹಚ್ಚಿ ಅವರಿಗೆ ಮಾಹಿತಿ ನೀಡಿ ಮಗುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ರೇಖಾಚಿತ್ರ ಬಿಡಿಸಿ ಹುಡುಕಾಟ: ಆಸ್ಪತ್ರೆಯ ಆಸುಪಾಸಿನಲ್ಲಿದ್ದ ಸಿಸಿ ಕ್ಯಾಮರಾಗಳಲ್ಲಿ ವೈದ್ಯೆ ರಶ್ಮಿ ಅವರ ಅಸ್ಪಷ್ಟ ಚಹರೆ ಪತ್ತೆಯಾಗಿತ್ತು. ಎಲ್ಲೂ ತನ್ನ ಸುಳಿವು ಸಿಗಬಾರದೆಂದು ರಶ್ನಿ ಮುಖಕ್ಕೆ ವೇಲ್ ಮುಚ್ಚಿಕೊಂಡಿದ್ದರು. ಪೊಲೀಸರು ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದ ಅಸ್ಪಷ್ಟ ಮಹಿಳೆಯ ರೇಖಾ ಚಿತ್ರ ಬಿಡಿಸಿ ಸಾರ್ವಜನಿಕ ಪ್ರದೇಶಗಳಲ್ಲಿ ಅಂಟಿಸಿ ಮಾಹಿತಿ ನೀಡುವಂತೆ ಕೋರಿಕೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು