News Karnataka Kannada
Sunday, April 21 2024
Cricket
ವಿದೇಶ

ಮಂಗಳೂರು ವಿಮಾನ ದುರಂತಕ್ಕೆ ಇಂದಿಗೆ 11 ವರ್ಷ

Photo Credit :

ಮಂಗಳೂರು ವಿಮಾನ ದುರಂತಕ್ಕೆ ಇಂದಿಗೆ 11 ವರ್ಷ

ಮಂಗಳೂರು, : ಇಂದಿಗೆ ಸುಮಾರು 11 ವರ್ಷಗಳ ಹಿಂದೆ ಮಂಗಳೂರು ಘನಘೋರ ದುರಂತಕ್ಕೆ ಸಾಕ್ಷಿಯಾಗಿತ್ತು. ದುಬೈನಿಂದ ಬಂದ ಲೋಹದ ಹಕ್ಕಿ ಮಂಗಳೂರನ್ನು ಸ್ಪರ್ಶಿಸುತ್ತಲೇ ಪತನವಾಗಿ 158 ಮಂದಿ ದಾರುಣ ಸಾವನ್ನಪ್ಪಿದರು. ದೇಶದ ನಾಗರಿಕ ವಿಮಾನಯಾನ ರಂಗ ಎಂದೂ ಮರೆಯದ ಮಂಗಳೂರು ವಿಮಾನ ದುರಂತ ಸಂಭವಿಸಿ ಇಂದಿಗೆ ಹನ್ನೊಂದು ವರ್ಷಗಳು ಪೂರ್ಣಗೊಂಡಿದೆ.ಅದು 2010 ಮೇ 22ನೇ ತಾರೀಖು. ಆ ದಿನ ಮುಂಗಾರು ಆರಂಭಕ್ಕಾಗಿ ಇಳೆ ಕಾದಿತ್ತು. ರಾತ್ರಿಯಿಡೀ ಮಳೆ ಸುರಿದಿದ್ದರಿಂದ ಭೂಮಿಯೂ ಶಾಂತವಾಗಿದ್ದಳು. ಪಡುವಣ ದಿಕ್ಕಿನಲ್ಲಿ ಸೂರ್ಯ ಉದಯಿಸಿ ಆಗಲೇ ಅರ್ಧ ಗಂಟೆ ಕಳೆದಿತ್ತು. ಜನ ದೈನಂದಿನ ಕಾರ್ಯವನ್ನು ಆರಂಭಿಸುವ ಉತ್ಸಾಹದಲ್ಲಿದ್ದರು.
ಪ್ರಕೃತಿಯ ಅದ್ಭುತ ಸೌಂದರ್ಯದ ನಡುವೆ ಇರುವ ಮಂಗಳೂರು ವಿಮಾನ ನಿಲ್ದಾಣದಲ್ಲೂ ಆ ಮುಂಜಾನೆ ಎಲ್ಲರಲ್ಲೂ ನಿಶ್ಚಿಂತತೆವಿತ್ತು. ಪಾಳಿ ಮುಗಿಸಿ ಮನೆಗೆ ತೆರಳುವ ತವಕದಲ್ಲಿ ವಿಮಾನ ಸಿಬ್ಬಂದಿಗಳಿದ್ದರು. ತಮ್ಮವರಿಗಾಗಿ ಕಾದು ಕುಳಿತ ನೂರಾರು ಕುಟುಂಬಗಳಿತ್ತು. ವಿಮಾನ ನಿಲ್ದಾಣದ ಪ್ರವೇಶ ದ್ವಾರವನ್ನೇ ತದೇಕಚಿತ್ತದಿಂದ ಗಮನಿಸುತ್ತಿದ್ದ, ತಮ್ಮವರನ್ನು ನೋಡಬೇಕೆಂಬ ತುಂಬು ಆಸೆಯ ಕಣ್ಣುಗಳು ಅಲ್ಲಿದ್ದವು. ದುಬೈಯ ಮರಳಿನ ಭೂಮಿಯಿಂದ ಕಡಲನಗರಿ ಮಂಗಳೂರಿಗೆ ಛಂಗನೇ ಹಾರಿದ್ದ ಏರ್ ಇಂಡಿಯಾ ವಿಮಾನ ವಿಮಾದಲ್ಲಿ 166 ಮಂದಿ ಪ್ರಯಾಣಿಕರಿದ್ದರು.
ವಿಮಾನ ಮಂಗಳೂರು ವಾಯುಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆಯೇ 166 ಮಂದಿಯಲ್ಲೂ ತಾಯಿಯ ಮಡಿಲಿಗೆ ಬಂದ ಅದ್ಭುತ ಅನುಭವಾಗಿತ್ತು. ವಿಮಾನ ಎಲ್ಲಾ ಸುರಕ್ಷಾ ಸಂಕೇತಗಳ ವಿನಿಮಯದೊಂದಿಗೆ ರನ್‌ವೇಗೆ ಇಳಿದಿತ್ತು. ಆದರೆ, ರನ್‌ವೇಯಲ್ಲಿ ಕ್ರೂರ ವಿಧಿ ಹೊಂಚು ಹಾಕಿ ಕುಳಿತಿತ್ತು. ರನ್‌ವೇಯಲ್ಲಿ ನಿಲ್ಲಬೇಕಾದ ವಿಮಾನ ನೇರವಾಗಿ ಮುಂದಕ್ಕೆ ಚಲಿಸಿ ಸೂಚನಾ ಗೋಪುರ ಕಂಬಗಳಿಗೆ ಡಿಕ್ಕಿಯಾಗಿ ಆಳವಾದ ಪ್ರದೇಶಕ್ಕೆ ಬಿದ್ದು ಪತನವಾಗಿತ್ತು.
ವಿಮಾನ ಬಿದ್ದ ತೀವ್ರತೆಗೆ ಸ್ಫೋಟವಾಗಿ 166 ಮಂದಿಯಲ್ಲಿ 158 ಮಂದಿ ಸುಟ್ಟು ಕರಲಾಗಿದ್ದರು. ಊರು, ಮನೆಯವರನ್ನೇ ಕಣ್ಣಲ್ಲಿ ತುಂಬಿದ್ದ ಆ ಮನಸ್ಸುಗಳು ಬೆಂಕಿಯ ಕೆನ್ನಾಲಿಗೆಗೆ ಉರಿದುಹೋಗಿತ್ತು. ವಿಮಾನದ ಪೈಲಟ್, ಸಿಬ್ಬಂದಿ ಸಹಿತ 158 ಮಂದಿ ಮೃತರಾಗಿದ್ದರು. 135 ಮಂದಿ ವಯಸ್ಕರು, 19 ಮಕ್ಕಳು ಹಾಗೂ 6 ಮಂದಿ ಶಿಶುಗಳು, 6 ವಿಮಾನ ಸಿಬ್ಬಂದಿ ಸೇರಿ 166 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ 8 ಮಂದಿ ಬದುಕುಳಿದಿದ್ದರು.
ತಣ್ಣೀರುಬಾವಿಯ ಪ್ರದೀಪ್, ಹಂಪನಕಟ್ಟೆಯ ಮಹಮ್ಮದ್ ಉಸ್ಮಾನ್, ವಾಮಂಜೂರಿನ ಜ್ಯೂಯೆಲ್ ಡಿಸೋಜಾ, ಕೇರಳದ ಕಣ್ಣೂರು ಕಂಬಿಲ್‌ನ ಮಾಹಿನ್ ಕುಟ್ಟಿ, ಕಾಸರಗೋಡು ಉದಮ ಕುಲಿಕುನ್ನು ನಿವಾಸಿ ಕೃಷ್ಣನ್, ಉಳ್ಳಾಲದ ಮಹಮ್ಮದ್ ಫಾರೂಕ್, ಪುತ್ತೂರಿನ ಸಾಮೆತ್ತಡ್ಕ ನಿವಾಸಿ ಅಬ್ದುಲ್ಲಾ ಮತ್ತು ಮಂಗಳೂರು ಕೆಎಂಸಿ ವಿದ್ಯಾರ್ಥಿನಿ ಬಾಂಗ್ಲಾದ ಸಬ್ರೀನಾ ಮಾತ್ರ ಪವಾಡ ಸದೃಶವಾಗಿ ಬದುಕುಳಿದಿದ್ದರು. ಇದರಲ್ಲಿ ಕೆಲವರು ವಿಮಾನದಿಂದ ಹಾರಿ ಬಚಾವಾಗಿದ್ದರೆ, ಇನ್ನೂ ಕೆಲವರು ಜೀವದ ಆಸೆಯಿಂದ ವಿಮಾನ ಪತನವಾಗುತ್ತಿದ್ದಂತೆಯೇ ಹೊರಗೆ ಧುಮುಕಿ ಜೀವ ಉಳಿಸಿಕೊಂಡಿದ್ದರು.
ವಿಮಾನ ದುರಂತದ ಸುದ್ದಿ ಕಾಳ್ಗಿಚ್ಚುನಂತೆ ಪಸರಿಸಿದ್ದೇ ತಡ ಜನ ತಂಡ ತಂಡವಾಗಿ ಘಟನಾ ಸ್ಥಳಕ್ಕೆ ಬಂದರು. ಕಣಿವೆಯಲ್ಲಿ ಬಿದ್ದು, ಬೆಂಕಿಯುಗುಳುತ್ತಿದ್ದ ವಿಮಾನದಲ್ಲಿ ಯಾರಾದರೂ ಬದುಕಿದ್ದಾರಾ ಅಂತಾ ಮೊದಲು ನೋಡಿದ್ದೇ ಸ್ಥಳೀಯರು. ಕಂದಕದಿಂದ ಎತ್ತರದಲ್ಲಿರುವ ರಸ್ತೆಗೆ ಕೈ ಕೈ ನೀಡುತ್ತಾ ಮೃತದೇಹಗಳನ್ನು ತರಲು ನೆರವಾದರು. ರಸ್ತೆಗಳನ್ನು ನಿರ್ಮಿಸಿ ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನಗಳನ್ನು ತರಲು ಸಹಾಯವಾದರು. ಇಳಿಜಾರು ಪ್ರದೇಶದಲ್ಲೂ ಜಾತಿ-ಧರ್ಮದ ಬೇಧವಿಲ್ಲದೆ ಮಾನವಗೋಡೆಯನ್ನು ರಚಿಸಿ ಕಾರ್ಯಾಚರಣೆಯಲ್ಲಿ ನೆರವಾದರು.
ಮಂಗಳೂರು ವಿಮಾನ ನಿಲ್ದಾಣದ ದುರಂತಕ್ಕೆ ಮುಖ್ಯ ಪೈಲೆಟ್‌ನ ನಿರ್ಲಕ್ಷ್ಯ ಮತ್ತು ಸಹ ಪೈಲೆಟ್‌ನ ಸಲಹೆಯನ್ನು ಪಾಲಿಸದೇ ಇದ್ದದ್ದು ಪ್ರಮುಖ ಕಾರಣವೆಂದು ಆ ನಂತರದ ತನಿಖೆಯಲ್ಲಿ ಬಯಲಾಗಿತ್ತು. ವಿಮಾನದ ಬ್ಲ್ಯಾಕ್ ಬಾಕ್ಸ್‌ನಲ್ಲಿ ಈ ಎಲ್ಲಾ ವಿಚಾರಗಳು ಅಡಕವಾಗಿತ್ತು. ಈ ದುರಂತಕ್ಕೆ ಸಂಭವಿಸಿದಂತೆ 2012ರಲ್ಲಿ ಮಂಗಳೂರು ಮೂಲದ 812 ಫೌಂಡೇಶನ್ ಎಂಬ ಸಂಸ್ಥೆ ಭಾರತೀಯ ವಿಮಾನಯಾನ ಪ್ರಾಧಿಕಾರ, ಏರ್ ಇಂಡಿಯಾ ಮತ್ತು ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ನಲ್ಲಿ ಖಾಸಗಿ ದೂರನ್ನು ಹಾಕಿತ್ತು. ಅಂತರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ಮಾನದಂಡಗಳ ಪ್ರಕಾರ ಮಂಗಳೂರು ವಿಮಾನ ನಿಲ್ದಾಣದ ಕಾರ್ಯನಿರ್ವಹಣೆ ಯೋಗ್ಯವಾಗಿರಲಿಲ್ಲ. ಆದರೂ ವೈಮಾನಿಕ ಚಟುವಟಿಕೆಗಳು ನಡೆಯುತ್ತಿದೆ. ವಿಮಾನ ದುರಂತವು ಏರ್ ಇಂಡಿಯಾ ಪ್ರಾಧಿಕಾರ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯದ ನಿರ್ದೇಶಕರ ಸಂಪೂರ್ಣ ನಿರ್ಲಕ್ಷ್ಯದಿಂದ ಆಗಿದೆ ಎಂದು ಆರೋಪಿಸಲಾಗಿತ್ತು. ಆದರೆ ಕಳೆದ ತಿಂಗಳ ಹಿಂದೆ ಹೈಕೋರ್ಟ್‌ ದೂರು ಮತ್ತು ವಿಚಾರಣೆಯನ್ನು ರದ್ದು ಮಾಡಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು