News Karnataka Kannada
Friday, April 19 2024
Cricket
ವಿದೇಶ

ಭಾರತ ತಲುಪಲಿವೆ 40 ಸಾವಿರ ವಯಲ್ಸ್ ಬ್ಲ್ಯಾಕ್ ಫಂಗಸ್ ಔ‍ಷಧಿ

Photo Credit :

ಭಾರತ ತಲುಪಲಿವೆ 40 ಸಾವಿರ ವಯಲ್ಸ್ ಬ್ಲ್ಯಾಕ್ ಫಂಗಸ್ ಔ‍ಷಧಿ

ಬೆಂಗಳೂರು, : ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಮುಂದಿನ ವಾರದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ರೆಮ್‌ಡೆಸಿವಿರ್ ಚುಚ್ಚುಮದ್ದಿನ ಹಂಚಿಕೆ ಮಾಡುವ ಪ್ರಕ್ರಿಯೆಯಲ್ಲಿದ್ದು, ಸಕ್ರಿಯ ಪ್ರಕರಣಗಳನ್ನು ಆಧರಿಸಿ ರಾಜ್ಯಕ್ಕೆ ಸಿಂಹಪಾಲು ದೊರೆಯಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ. ಬೆಂಗಳೂರಿನಲ್ಲಿ ಡಿಸಿಎಂ ಡಾ.ಸಿ.ಎನ್ ಅಶ್ವಥ್ ನಾರಾಯಣ ಅವರೊಂದಿಗೆ ಜಂಟಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ, ಈ ವಾರದ ಬಳಕೆಗಾಗಿ ರಾಜ್ಯಕ್ಕೆ ಅತಿಹೆಚ್ಚು 4.25 ಲಕ್ಷ ವಯಲ್ಸ್ ರೆಮ್‌ಡೆಸಿವಿರ್ ಹಂಚಿಕೆ ಮಾಡಲಾಗಿತ್ತು. ಮೇ24ರಿಂದ 30ರವರೆಗಿನ ಬಳಕೆಗಾಗಿಯೂ ರಾಜ್ಯಕ್ಕೆ ಹೆಚ್ಚಿನ ರೆಮ್‌ಡೆಸಿವಿರ್ ದೊರೆಯಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಕಪ್ಪು ಶಿಲೀಂಧ್ರ (Mucormycosis, Black Fungus) ಪ್ರಕರಣಗಳು ವರದಿಯಾಗುತ್ತಿದ್ದು, ಎಂಫೋಟೆರಿಸಿನ್-ಬಿ (Amphotericin-B) ಔಷಧಕ್ಕಾಗಿ ಎಲ್ಲ ರಾಜ್ಯಗಳಿಂದಲೂ ಬೇಡಿಕೆ ಬರುತ್ತಿದೆ. ಕರ್ನಾಟಕದಿಂದಲೂ 20 ಸಾವಿರ ವಯಲ್ಸ್‌ಗೆ ಬೇಡಿಕೆ ಬಂದಿದೆ. ಆಂತರಿಕವಾಗಿ ಇದರ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ (ಭಾರತದಲ್ಲಿ ಐದು ಫಾರ್ಮಾ ಕಂಪನಿಗಳು ಈ ಔಷಧ ಉತ್ಪಾದನೆಯ ಲೈಸನ್ಸ್ ಪಡೆದಿದ್ದು ಹೊಸದಾಗಿ ಇನ್ನೂ 5 ಕಂಪನಿಗಳಿಗೆ ಅನುಮತಿ ದೊರಕಿಸಿಕೊಡಲಾಗಿದೆ.) ಮೈಲಾನ್ ಫಾರ್ಮಾ ಕಂಪನಿಯ ಮೂಲಕ ಮೂರು ಲಕ್ಷ ವಯಲ್ಸ್ ಎಂಫೋಟೆರಿಸಿನ್-ಬಿ ಆಮದು ಮಾಡಿಕೊಳ್ಳಲಾಗುತ್ತಿದೆ. ಶನಿವಾರ 40 ಸಾವಿರ ವಯಲ್ಸ್ ಎಂಫೋಟೆರಿಸಿನ್-ಬಿ ಭಾರತ ತಲುಪಲಿದ್ದು, ರಾಜ್ಯಕ್ಕೆ ಆದಷ್ಟು ಹೆಚ್ಚು ಪ್ರಮಾಣದಲ್ಲಿ ಈ ಔಷಧವನ್ನು ದೊರಕಿಸಿಕೊಡಲು ಯತ್ನಿಸುವುದಾಗಿ ಔಷಧ ಇಲಾಖೆಯನ್ನೂ ಹೊಂದಿರುವ ಸದಾನಂದಗೌಡ ಭರವಸೆ ನೀಡಿದರು.
ಕರ್ನಾಟಕಕ್ಕೆ ಓರಿಸ್ಸಾ, ಜಾರ್ಖಂಡ್ ರಾಜ್ಯಗಳಿಂದ ಆಕ್ಸಿಜನ್ ಎಕ್ಸ್‌ಪ್ರೆಸ್ ಮೂಲಕ 500 ಟನ್‌ಗಳಿಗೂ ಹೆಚ್ಚು ಲಿಕ್ವಿಡ್ ಆಮ್ಲಜನಕ ಪೂರೈಕೆ ಮಾಡಲಾಗಿದೆ. ಸಾಗಣೆಯಲ್ಲಿ ಆಗುವ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯದಲ್ಲಿ (ಜಿಂದಾಲ್ ಉಕ್ಕು ಕಾರ್ಖಾನೆ ತೋರಣಗಲ್ಲು, ಬಳ್ಳಾರಿ) ಉತ್ಪಾದನೆ ಆಗುವ ಆಮ್ಲಜನಕವನ್ನು ರಾಜ್ಯದಲ್ಲಿಯೇ ಬಳಸಿಕೊಳ್ಳುವ ಬಗ್ಗೆ ರೇಲ್ವೆ ಸಚಿವ ಪಿಯುಷ್ ಗೋಯಲ್ ಅವರೊಂದಿಗೆ ಚರ್ಚಿಸಲಾಗಿದ್ದು, ಅವರು ಈ ವ್ಯವಸ್ಥೆಗೆ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದೂ ಅವರು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇಂದ್ರ ಸಚಿವ ಸದಾನಂದಗೌಡ, ಈ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ಗ್ರಾಮೀಣ ನಿವಾಸಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಅದಕ್ಕಾಗಿ ಲಭ್ಯವಿರುವ ಸಮುದಾಯ ಭವನ ಮುಂತಾದ ಸಾರ್ವಜನಿಕ ಕಟ್ಟಡಗಳನ್ನು ಕೋವಿಡ್ ಕೇಂದ್ರಗಳನ್ನಾಗಿ ಪರಿವರ್ತಿಸಬೇಕಾಗಿದೆ. ಗ್ರಾಮೀಣ ಸೋಂಕಿತರಿಗೆ ಅವರಿರುವಲ್ಲಿಯೇ ಕೋವಿಡ್ ಚಿಕಿತ್ಸೆಯ ಕಿಟ್‌ಗಳನ್ನು ಒದಗಿಸುವ ಬಗ್ಗೆ ಸ್ಥಳೀಯ ಆಡಳಿತ ಚಿಂತಿಸಬೇಕು ಎಂದೂ ಕೇಂದ್ರ ಸಚಿವರು ಸಲಹೆ ನೀಡಿದರು. ಕೇಂದ್ರ ಸರ್ಕಾರವು ರೈತರಿಗೆ ಹೆಚ್ಚುವರಿಯಾಗಿ 14,775 ಕೋಟಿ ರೂ. ರಸಗೊಬ್ಬರ ಸಬ್ಸಿಡಿ ಘೋಷಿಸಿರುವ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಇದು ಪ್ರಧಾನಿ ನರೇಂದ್ರ ಮೋದಿಯವರು ರೈತ ಕಲ್ಯಾಣದ ಬಗ್ಗೆ ಹೊಂದಿರುವ ಕಾಳಜಿಯನ್ನು ತೋರಿಸುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾವಸ್ತುಗಳ ಬೆಲೆ ಹೆಚ್ಚಳವಾಗಿ ಭಾರತದಲ್ಲಿ ಡಿಎಪಿ, ಪಿ&ಕೆ ಮುಂತಾದ ಗೊಬ್ಬರಗಳ ದುಬಾರಿಯಾದವು. ರೈತರಿಗೆ ಇದರ ಬಿಸಿ ತಟ್ಟದಂತೆ ನೋಡಿಕೋಳ್ಳಲು ಕೇಂದ್ರವು ಈ ಮಹತ್ವದ ನಿರ್ಧಾರ ಕೈಗೊಂಡಿತು. ಇದರಿಂದ ರಾಜ್ಯದ ರೈತರಿಗೂ ಸುಮಾರು 750 ಕೋಟಿ ರೂ. ಉಳಿತಾಯವಾಗುತ್ತಿದೆ ಎಂದರು.
ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಮಾತಾನಾಡಿ, ಕೋವಿಡ್ ಹೋರಾಟದಲ್ಲಿ ಕೇಂದ್ರವು ರಾಜ್ಯಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದೆ. ರಾಜ್ಯದಲ್ಲಿ ರೆಮ್‌ಡೆಸಿವಿರ್ ಮತ್ತಿತರ ಔಷಧಗಳು ಅಥವಾ ಆಮ್ಲಜನಕ ಕೊರತೆಯಿಲ್ಲ, ನೈಜವಾಗಿ ಬಫರ್ ಸ್ಟಾಕ್ ಇದೆ, ಎಂಫೊಟೆರಿಸಿನ್-ಬಿ ಔಷಧಕ್ಕೆ ಸಾಕಷ್ಟು ಪರ್ಯಾಯ ಔಷಧಗಳು ಇದ್ದು, ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದರು. ರಾಜ್ಯಾದ್ಯಂತ ತಾತ್ಕಾಲಿಕ ಕೋವಿಡ್ ಆರೈಕೆ ಕೇಂದ್ರ ಹಾಗೂ ಸುಮಾರು 500 ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಕೋವಿಡ್ ಲಸಿಕೆ ನೀಡಿಕೆಗೆ ಸಂಬಂಧಿಸಿದಂತೆ ಹೇಳುವುದಾದರೆ, ರಾಜ್ಯದಲ್ಲಿ 1.9 ಲಕ್ಷ ಜನರಿಗೆ ಕೊವ್ಯಾಕ್ಸಿನ್ 2ನೇ ಡೋಸ್ ಹಾಕಿಸಬೇಕಿದ್ದು, 1.7 ಲಕ್ಷ ಡೋಸ್ ಲಭ್ಯವಿದೆ. ಬರುವ ಡಿಸೆಂಬರ್ ಒಳಗಾಗಿ ರಾಜ್ಯದ ಪ್ರತಿಯೊಬ್ಬರಿಗೂ ಕನಿಷ್ಠ ಪಕ್ಷ ಮೊದಲನೇ ಲಸಿಕೆ ಹಾಕಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಅಬಕಾರಿ ಸಚಿವ ಕೆ.ಗೋಪಾಲಯ್ಯ, ಬಿಡಿಎ ಅಧ್ಯಕ್ಷ ಎಸ್.ವಿಶ್ವನಾಥ್ ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ನಾರಾಯಣ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು