News Karnataka Kannada
Monday, April 22 2024
Cricket
ವಿದೇಶ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲಿಸಲು ಪ್ರಶಾಂತ್‌ ಕಿಶೋರ್‌ ಕಾರ್ಯತಂತ್ರವೇನು ಗೊತ್ತಾ ?

Photo Credit :

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲಿಸಲು ಪ್ರಶಾಂತ್‌ ಕಿಶೋರ್‌ ಕಾರ್ಯತಂತ್ರವೇನು ಗೊತ್ತಾ ?

ಚುನಾವಣಾ ಕಾರ್ಯತಂತ್ರಜ್ಞ ಎಂಬ ಹೊಸ ಪರಿಕಲ್ಪನೆಯನ್ನು ಭಾರತದಲ್ಲಿ ಚಾಲ್ತಿಗೆ ತಂದ ಯಶಸ್ವಿ ರಾಜಕೀಯ ಕಾರ್ಯತಂತ್ರ ನಿಪುಣ (political strategist) ಪ್ರಶಾಂತ್ ಕಿಶೋರ್. 10 ವರ್ಷಗಳ ತಮ್ಮ ವೃತ್ತಿಪಯಣದಲ್ಲಿ 2021ರ ಎರಡು ವಿಧಾನಸಭಾ ಚುನಾವಣೆಗಳು ಅವರಿಗೆ ಅತಿಹೆಚ್ಚು ಸಂತೋಷ ಕೊಟ್ಟಿವೆ. 2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ಪ್ರಶಾಂತ್ ಕಿಶೋರ್ ಬಗ್ಗೆ ದೇಶ ನಿಬ್ಬೆರಗಾಗಿ ಗಮನಿಸಿತು. ಇದೀಗ ಅದೇ ಪಕ್ಷದ ಬಿರುಸಿನ ಪ್ರಚಾರವನ್ನು ಪಶ್ಚಿಮ ಬಂಗಾಳದಲ್ಲಿ ವಿಫಲಗೊಳಿಸುವ ಮೂಲಕ ಮತ್ತೊಮ್ಮೆ ಪ್ರಶಾಂತ್ ರಾಷ್ಟ್ರ ರಾಜಕಾರಣಗಳಲ್ಲಿ ಮುನ್ನೆಲೆಗೆ ಬಂದಿದ್ದಾರೆ.
2019ರಲ್ಲಿ ಪ್ರಶಾಂತ್ ಕಿಶೋರ್ ಅವರನ್ನು ತೃಣಮೂಲ ಕಾಂಗ್ರೆಸ್​ ತನ್ನ ಚುನಾವಣಾ ಸಿದ್ಧತೆಯ ಮಾರ್ಗದರ್ಶನಕ್ಕಾಗಿ ನೇಮಿಸಿಕೊಂಡಿತ್ತು. ಟಿಎಂಸಿ ಕರೆಯನ್ನು ಒಪ್ಪಿಕೊಂಡ ಪ್ರಶಾಂತ್, ಬಿಜೆಪಿಯಂಥ ಬೃಹತ್ ಮತ್ತು ಚುರುಕಿನ ರಾಜಕೀಯ ಪಕ್ಷದ ಎದುರು ಪ್ರಾದೇಶಿಕ ಪಕ್ಷವನ್ನು ಗೆಲ್ಲಿಸಲು ತನ್ನಿಂದ ಸಾಧ್ಯವಿದೆ ಎಂದು ಈ ಬಾರಿ ನಿರೂಪಿಸಿದರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಪ್ರಚಾರ ತಂತ್ರಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ನೋಡಿಕೊಳ್ಳುತ್ತಿದ್ದರು. ‘ಚುನಾವಣಾ ಚಾಣಕ್ಯ’ ಎಂದೇ ಬಿಜೆಪಿಯ ಅಭಿಮಾನಿಗಳು ಕರೆಯುವ ಅಮಿತ್​ ಶಾ ಹಲವು ರಾಜ್ಯಗಳಲ್ಲಿ ಪಕ್ಷವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದವರು. ಹಿಂದೆ ಬಿಜೆಪಿಯೊಂದಿಗೆ ಪ್ರಶಾಂತ್ ಕಿಶೋರ್ ಹೊಂದಿದ್ದ ಆಪ್ತ ಒಡನಾಟದ ನಂಟು ಕಡಿಯಲು ಅಮಿತ್​ ಶಾ ಪ್ರಭಾವವೇ ಕಾರಣ ಎಂಬ ಮಾತುಗಳಿವೆ. ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ಬಿಜೆಪಿಯ ತಂತ್ರಗಳನ್ನು ರೂಪಿಸಿದರೆ, ಪ್ರಶಾಂತ್ ಕಿಶೋರ್ ಟಿಎಂಸಿಯ ತಂತ್ರಗಳನ್ನು ರೂಪಿಸಿದ್ದರು. ಹೀಗಾಗಿಯೇ ಈಗ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸಾಧಿಸಿರುವ ಗೆಲುವು ಪ್ರಶಾಂತ್​ ಕಿಶೋರ್ ಪಾಲಿಗೆ ‘ಸಿಹಿಯಾದ ಸೇಡು’ ತೀರಿಸಿಕೊಂಡ ಖುಷಿಯನ್ನೂ ನೀಡಿದೆ ಎಂದು ಟಿಎಂಸಿಯ ಹಿರಿಯ ನಾಯಕರು ಹೇಳುತ್ತಾರೆ.
ಈ ಬಾರಿ ಪಶ್ಚಿಮ ಬಂಗಾಳ ಮಾತ್ರವೇ ಅಲ್ಲ. ಪ್ರಶಾಂತ್ ಕಿಶೋರ್ ಮತ್ತು ಅವರ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (I-PAC) ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ಪಕ್ಷಕ್ಕೂ ಚುನಾವಣಾ ಸಲಹೆಗಳನ್ನು ನೀಡಿತ್ತು. 2018ರಲ್ಲಿ ಹಿರಿಯ ಮುತ್ಸದಿ ಎಂ.ಕರುಣಾನಿಧಿ ನಿಧನದ ನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ಇದು. ಈ ಬಾರಿ ಡಿಎಂಕೆ ನೆಮ್ಮದಿಯಾಗಿ ಅಧಿಕಾರ ಹಿಡಿಯುವಷ್ಟು ಬಹುಮತ ಪಡೆದು, ಅಧಿಕಾರಕ್ಕೆ ಬಂದಿದೆ. ಈ ಬಾರಿಯ ಚುನಾವಣೆ ಪ್ರಶಾಂತ್ ಕಿಶೋರ್ ಪಾಲಿಗೆ ‘ಹಂಸಗೀತೆ’ ಎಂದು ಹೇಳಲಾಗುತ್ತಿದೆ. ಅಂದರೆ ಇಲ್ಲಿಂದಾಚೆಗೆ ಪ್ರಶಾಂತ್ ಕಿಶೋರ್ ಚುನಾವಣೆ ಗೆಲ್ಲಿಸಿಕೊಡುವ ತಮ್ಮ ಕಸುಬಿನಿಂದ ದೂರ ಉಳಿಯಲಿದ್ದೇನೆ ಎಂದು ಪ್ರಶಾಂತ್ ಘೋಷಿಸಿಕೊಂಡಿದ್ದಾರೆ. ಬದುಕಿನಲ್ಲಿ ಬೇರೆ ಏನಾದರೂ ಮಾಡುತ್ತೇನೆ ಎಂದು ಹೇಳಿದ್ದಾರೆ ಪ್ರಶಾಂತ್.
ಟಿಎಂಸಿ ನಾಯಕರು ಪ್ರಶಾಂತ್ ಕಿಶೋರ್ ಅವರನ್ನು ಸಂಪರ್ಕಿಸಿದ್ದು 2019ರಲ್ಲಿ. ಪಶ್ಚಿಮ ಬಂಗಾಳದ ಬಗ್ಗೆ ಬಿಜೆಪಿ ಹೊಂದಿರುವ ಮಹತ್ವಾಕಾಂಕ್ಷೆಯ ಅರಿವಿದ್ದ ಪ್ರಶಾಂತ್ ಕಿಶೋರ್ ಟಿಎಂಸಿಯನ್ನು ಗೆಲುವಿನ ದಡ ಸೇರಿಸುವುದು ಸುಲಭದ ಕೆಲಸವಲ್ಲ ಎಂದು ಅರ್ಥ ಮಾಡಿಕೊಂಡಿದ್ದರು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎಂದಿಗೂ ಅಧಿಕಾರದಲ್ಲಿ ಇರಲಿಲ್ಲ. ಆದರೆ ತನ್ನನ್ನು ಅಧಿಕಾರದಿಂದ ದೂರ ಇಡಬಹುದಾದ ಹಲವು ಅಡೆತಡೆಗಳನ್ನು ಬಿಜೆಪಿ ನಾಜೂಕಾಗಿ ದೂರ ಸರಿಸಿಕೊಂಡಿತ್ತು. ಇದನ್ನು ಅರ್ಥ ಮಾಡಿಕೊಂಡೇ ಪ್ರಶಾಂತ್ ಕಿಶೋರ್ ಕೆಲಸ ಆರಂಭಿಸಿದರು. ಕಚೇರಿ ಆರಂಭಿಸಲೆಂದು ಐ-ಪ್ಯಾಕ್​ನ ಮೊದಲ ತಂಡ ಕೊಲ್ಕತ್ತಾಕ್ಕೆ ಬಂದಿದ್ದು ಜುಲೈ 2019ರಲ್ಲಿ. ಟಿಎಂಸಿಯ ಪ್ರಚಾರದ ಮೇಲೆ ಪ್ರಶಾಂತ್ ಕಿಶೋರ್​ರ ಪ್ರಭಾವ ಎಲ್ಲ ಹಂತದಲ್ಲಿಯೂ ಇತ್ತು. ಜನರನ್ನು ಕೇಂದ್ರೀಕರಿಸಿ ರೂಪಿಸಿದ ದೀದಿ-ಕೆ-ಬೋಲೋ (ದೀದಿಗೆ ಹೇಳಿ) ಕಾರ್ಯಕ್ರಮದಿಂದ ದುವಾರೆ ಸರ್ಕಾರ್ (ನಿಮ್ಮ ಮನೆ ಬಾಗಿಲಿಗೆ ಸರ್ಕಾರ) ಯೋಜನೆಯವರೆಗೂ ಹಲವು ಘೋಷಣೆಗಳಲ್ಲಿ ಕಿಶೋರ್ ಕೈಚಳಕವಿತ್ತು. ಆಕರ್ಷಕ ಘೋಷವಾಕ್ಯಗಳು ಕಿಶೋರ್​ರ ಕೈಚಳಕದಲ್ಲಿ ಮೂಡಿಬಂದವು.
ಪಶ್ಚಿಮ ಬಂಗಾಳದಲ್ಲಿ ಒಳಗಿನವರು-ಹೊರಗಿನವರು ಕಥನ ಕಟ್ಟಿದ್ದು ಸಹ ಇದೇ ಪ್ರಶಾಂತ್ ಕಿಶೋರ್. ದೆಹಲಿಯಿಂದ ಬರುತ್ತಿದ್ದ ಬಿಜೆಪಿ ನಾಯಕರು ಬಂಗಾಳದ ಸಾಂಸ್ಕೃತಿಕ ರಾಯಭಾರಿಗಳ ಬಗ್ಗೆ ಮಾತನಾಡಲು ಆರಂಭಿಸಿದಾಗ ಪ್ರಶಾಂತ್ ಕಿಶೋರ್ ಒಳಗಿನವರು-ಹೊರಗಿನವರು ವಿಚಾರವನ್ನು ಮುನ್ನೆಲೆಗೆ ಬರುವಂತೆ ಮಾಡಿ ತಿರುಗೇಟು ನೀಡಿದರು. ‘ಬಾಂಗ್ಲಾ ನಿಜೆರ್ ಮೆಯೆಕಿ ಚಾಯ್ (ಬಂಗಾಳಕ್ಕೆ ಅದರ ಮಗಳು ಮಾತ್ರ ಬೇಕು) ಎಂಬ ಘೋಷಣೆಯನ್ನು ನಾವು ಮುನ್ನೆಲೆಗೆ ತಂದೆವು. ಜನರು ಇದನ್ನು ಮೆಚ್ಚಿಕೊಂಡರು. ಬಿಜೆಪಿ ತನ್ನ ಸಕಲ ಸಾಮರ್ಥ್ಯವನ್ನೂ ಬಂಗಾಳದಲ್ಲಿ ವಿನಿಯೋಗಿಸಿತು. ಇತರ ರಾಜ್ಯಗಳ ಶಾಸಕರು, ಸಂಸದರು, ಕೇಂದ್ರ ಸಚಿವರು ಬಂಗಾಳದಲ್ಲಿ ಪ್ರಚಾರ ನಡೆಸಿದರು. ಬಿಜೆಪಿಯ ಈ ಪ್ರಯತ್ನ ಉಲ್ಟಾ ಹೊಡೆಯಿತು’ ಎಂದು ಐ-ಪ್ಯಾಕ್​ ಸಂಸ್ಥೆಯಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವ ಅರ್ಜುನ್ ದತ್ತಾ ಹೇಳುತ್ತಾರೆ. ಬಹುಕಾಲದಿಂದ ಪ್ರಶಾಂತ್​ ಕಿಶೋರ್ ಜೊತೆಗಿರುವ ದತ್ತಾ, ಐ-ಪ್ಯಾಕ್​ ಆರಂಭವಾದ ದಿನದಿಂದಲೂ ಅದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಐ-ಪ್ಯಾಕ್ ಬಂದ ನಂತರ ಸುಮಾರು 300 ಸ್ವಯಂಸೇವಕರನ್ನು ಗುರುತಿಸಿಕೊಳ್ಳಲಾಯಿತು. ಇದರಲ್ಲಿ ಬಹುತೇಕರು ಸ್ಥಳೀಯರು ಎನ್ನುವುದು ಗಮನಾರ್ಹ ಸಂಗತಿ. ಇವರನ್ನು ರಾಜ್ಯದ ವಿವಿಧ ಭಾಗಗಳಿಗೆ, ತಾಲ್ಲೂಕು, ಹಳ್ಳಿಗಳಿಗೆ ಕಳುಹಿಸಿ ವಾಸ್ತವ ಸ್ಥಿತಿ ಏನು ಎಂಬುದನ್ನು ಗ್ರಹಿಸಲಾಯಿತು. 2016ರಿಂದ ಟಿಎಂಸಿ ರಾಜ್ಯದಲ್ಲಿ ಏನೆಲ್ಲಾ ಕೆಲಸ ಮಾಡಿದೆ ಎಂಬುದನ್ನು ಪರಿಶೀಲಿಸಿದ ತಂಡವು ಕಳೆದ ಡಿಸೆಂಬರ್​ನಲ್ಲಿ ‘ದೀದಿ-ಕೆ-ಬೋಲೊ’ (ದೀದಿಗೆ ಹೇಳಿ) ಆಂದೋಲನ ಆರಂಭಿಸಿತು. ಜನರು ತಮ್ಮ ಸಮಸ್ಯೆಗಳನ್ನು ದೂರವಾಣಿ ಮೂಲಕ ಅಥವಾ ಇಮೇಲ್ ಮೂಲಕ ದಾಖಲಿಸಲು ಅವಕಾಶ ಮಾಡಿಕೊಡುವ ಯೋಜನೆಯಿದು. ಈ ಕಾರ್ಯಕ್ರಮವು ಪಕ್ಷಕ್ಕೆ ಜನರೊಂದಿಗೆ ನೇರ ಸಂಪರ್ಕ ಬೆಳೆಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಇದಾದ ನಂತರ ‘ಬಾಂಗ್ಲಾರ್ ಗರ್ಬೊ ಮಮತಾ’ (ಬಂಗಾಳದ ಹೆಮ್ಮೆ ಮಮತಾ) ಘೋಷವಾಕ್ಯ ಬಳಕೆ ಆರಂಭವಾಯಿತು.
‘ಬಂಗಧ್ವನಿ ಯಾತ್ರಾ’ ಮೂಲಕ ಟಿಎಂಸಿಯ ಹಲವು ಹಂತಗಳ ನಾಯಕರು ಮತ್ತು ಕಾರ್ಯಕರ್ತರು ವಾರ್ಡ್​ ಮಟ್ಟಮಟ್ಟದಲ್ಲಿ ಮನೆಮನೆಗೆ ಭೇಟಿ ನೀಡಿದರು. ಜನ ಸೇರುವ ಕಡೆ ಸಭೆಗಳನ್ನು ನಡೆಸಿ, ಟೀಸ್ಟಾಲ್​ಗಳಲ್ಲಿ ಚರ್ಚೆಗೆ ಚಾಲನೆ ನೀಡಿ ಮತ್ತು ಸಾರ್ವಜನಿಕ ಉದ್ಯಾನಗಳಲ್ಲಿದ್ದವರನ್ನು ಮಾತಿಗೆಳೆದು ಟಿಎಂಸಿ ಕಾರ್ಯಕರ್ತರು ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಆರಂಭಿಸಿದರು. ಅವುಗಳ ಲೋಪದೋಷಗಳ ಬಗ್ಗೆ ಜನರ ಮಾತನ್ನು ಕೇಳಿಸಿಕೊಳ್ಳುತ್ತಿದ್ದರು. ಆಡಳಿತ ಚುಕ್ಕಾಣಿ ಹಿಡಿದವರಿಗೆ ಜನರ ಅಭಿಪ್ರಾಯಗಳನ್ನು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು