News Karnataka Kannada
Saturday, April 13 2024
Cricket
ವಿದೇಶ

ಕೋವಿಡ್‌–19 ಪಿಡುಗಿನ ಎರಡನೇ ಅಲೆಯು ಮೇ 14–18ರ ಹೊತ್ತಿಗೆ ಗರಿಷ್ಠ ಮಟ್ಟಕ್ಕೆ

Photo Credit :

ಕೋವಿಡ್‌–19 ಪಿಡುಗಿನ ಎರಡನೇ ಅಲೆಯು ಮೇ 14–18ರ ಹೊತ್ತಿಗೆ ಗರಿಷ್ಠ ಮಟ್ಟಕ್ಕೆ

ನವದೆಹಲಿ: ಕೋವಿಡ್‌–19 ಪಿಡುಗಿನ ಎರಡನೇ ಅಲೆಯು ಮೇ 14–18ರ ಹೊತ್ತಿಗೆ ಗರಿಷ್ಠ ಮಟ್ಟಕ್ಕೆ ತಲುಪಬಹುದು. ಈ ಹೊತ್ತಿಗೆ ದೇಶದಲ್ಲಿ 38 ಲಕ್ಷದಿಂದ 48 ಲಕ್ಷ ಸಕ್ರಿಯ ಪ್ರಕರಣಗಳು ಇರಬಹುದು. ಪ್ರತಿದಿನ ಹೊಸ ಪ್ರಕರಣಗಳ ಸಂಖ್ಯೆಯು 4.4 ಲಕ್ಷದಷ್ಟಾಗಬಹುದು ಎಂದು ಗಣಿತಶಾಸ್ತ್ರೀಯ ಮಾದರಿಯೊಂದರ ಆಧಾರದಲ್ಲಿ ಐಐಟಿ ವಿಜ್ಞಾನಿಗಳು ಅಂದಾಜಿಸಿದ್ದಾರೆ. ಕಾನ್ಪುರ ಮತ್ತು ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು ಈ ಲೆಕ್ಕಾಚಾರ ಹಾಕಿದ್ದಾರೆ.
ಮೇ 11-15ರ ನಡುವೆ 33 ಲಕ್ಷದಿಂದ 35 ಲಕ್ಷ ಸಕ್ರಿಯ ಪ್ರಕರಣಗಳೊಂದಿಗೆ ಸಾಂಕ್ರಾಮಿಕ ರೋಗವು ಗರಿಷ್ಠ ಹಂತ ತಲುಪಿ, ಮೇ ಅಂತ್ಯದ ವೇಳೆಗೆ ಇಳಿಕೆ ಕಾಣಲಿದೆ ಎಂದು ತಜ್ಞರು ಕಳೆದ ವಾರ ತಿಳಿಸಿದ್ದರು. ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತು ಗರಿಷ್ಠ ಮಟ್ಟ ತಲುಪುವ ದಿನಗಳನ್ನು ಅವರು ಇದೀಗ ಪರಿಷ್ಕರಿಸಿದ್ಧಾರೆ.ಏಪ್ರಿಲ್ 15ರ ವೇಳೆಗೆ ದೇಶದಲ್ಲಿ ಸಕ್ರಿಯ ಸೋಂಕುಗಳು ಗರಿಷ್ಠ ಮಟ್ಟದಲ್ಲಿ ಇರಲಿವೆ ಎಂದು ಈ ತಿಂಗಳ ಆರಂಭದಲ್ಲಿ ಊಹಿಸಲಾಗಿತ್ತು. ಆದರೆ ಅದು ನಿಜವಾಗಲಿಲ್ಲ.‘ಈ ಬಾರಿ ಕನಿಷ್ಠ ಮತ್ತು ಗರಿಷ್ಠ ಮೌಲ್ಯಗಳನ್ನು ನೀಡಿದ್ದೇನೆ. ನೈಜ ಸಂಖ್ಯೆಗಳು ನಾನು ಅಂದಾಜಿಸಿರುವ ಸಂಖ್ಯೆಗಳ ಒಳಗೇ ಬರುತ್ತವೆ ಎಂಬ ವಿಶ್ವಾಸವಿದೆ’ ಎಂದು ಖರಗಪುರ ಐಐಟಿ ಪ್ರಾಧ್ಯಾಪಕ ಮನಿಂದರ್ ಅಗರ್‌ವಾಲ್ ತಿಳಿಸಿದ್ದಾರೆ.ಸೂತ್ರ ಎಂಬ ಮಾದರಿಯ ಆಧಾರದಲ್ಲಿ ಈ ಲೆಕ್ಕಾಚಾರ ಹಾಕಲಾಗಿದೆ. ‘ಸೂತ್ರ’ ಮಾದರಿಯಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳಿವೆ ಎಂದು ವಿಜ್ಞಾನಿಗಳು ಅಪ್ರಕಟಿತ ಅಧ್ಯಯನ ವರದಿಯಲ್ಲಿ ಹೇಳಿದ್ದಾರೆ.
ಮೂರು ಮುಖ್ಯ ಅಂಶಗಳನ್ನು ಇರಿಸಿಕೊಂಡು ಸೂತ್ರ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಸೋಂಕು ಸಂಪರ್ಕ ದರ ಅಂದರೆ, ಸೋಂಕಿತ ವ್ಯಕ್ತಿಯು ಪ್ರತಿ ದಿನ ಎಷ್ಟು ಜನರಿಗೆ ಸೋಂಕು ತಗಲಿಸುತ್ತಾನೆ ಎಂಬ ಸಂಖ್ಯೆ, ಜನ ಸಮುದಾಯವು ಪಿಡುಗಿಗೆ ತೆರೆದುಕೊಂಡಿರುವ ಮಟ್ಟ ಮತ್ತು ದೃಢಪಟ್ಟ ಮತ್ತು ದೃಢಪಡದ ಪ್ರಕರಣಗಳ ಅನುಪಾತಗಳ ಆಧಾರದಲ್ಲಿ ಪಿಡುಗು ಯಾವಾಗ ಗರಿಷ್ಠ ಮಟ್ಟಕ್ಕೆ ತಲುಪಬಹುದು ಎಂದು ಅಂದಾಜಿಸಲಾಗಿದೆ.
ಏಪ್ರಿಲ್‌ ಮಧ್ಯ ಭಾಗ ಮತ್ತು ಮೇ ಮಧ್ಯ ಭಾಗದ ನಡುವಲ್ಲಿ ಪಿಡುಗು ಗರಿಷ್ಠ ಮಟ್ಟಕ್ಕೆ ತಲುಪಬಹುದು ಎಂದು ಅಶೋಕ ವಿಶ್ವವಿದ್ಯಾಲಯದ ಗೌತಮ್‌ ಮೆನನ್‌ ಮತ್ತು ಅವರ ತಂಡವು ಇತ್ತೀಚೆಗೆ ಅಂದಾಜಿಸಿತ್ತು. ಇದು ಅಲ್ಪಾವಧಿಯ ಅಂದಾಜು. ಯಾವುದೇ ರೀತಿಯಲ್ಲಿ ಲೆಕ್ಕ ಹಾಕಿದರೂ ಪಿಡುಗಿನ ಅನಿಶ್ಚಿತತೆಯಿಂದಾಗಿ ನಿಖರವಾಗಿ ಅಂದಾಜಿಸುವುದು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು