News Karnataka Kannada
Tuesday, April 23 2024
Cricket
ವಿದೇಶ

ಕೊರೊನಾವೈರಸ್ ಅಂಟದಿರಲು “ನಮ್ಮಲ್ಲೇ” ಮದ್ದು!

Photo Credit :

ಕೊರೊನಾವೈರಸ್ ಅಂಟದಿರಲು

ಕೊರೊನಾವೈರಸ್.. ಈ ಹೆಸರನ್ನು ಕೇಳಿದರೆ ಸಾಕು ಇಡೀ ಜಗತ್ತು ಒಂದು ಕ್ಷಣ ಬೆಚ್ಚಿ ಬೀಳುತ್ತದೆ. ಲಕ್ಷ ಲಕ್ಷ ಜೀವಗಳನ್ನು ಬಲಿ ಪಡೆದ ಈ ಮಹಾಮಾರಿ ಜನರ ಮನಸ್ಸಲ್ಲಿ ಹಾಗೂ ವಾಸ್ತವದ ಬದುಕಿನಲ್ಲಿ ಮೂಡಿಸಿದ ಕಪ್ಪು ಛಾಯೆ ಅಷ್ಟರ ಮಟ್ಟಿಗಿದೆ.
ಬೆಳಕು ಮೂಡಿ ಕತ್ತಲು ಆಗುವಷ್ಟರಲ್ಲೇ ಪಕ್ಕದ ಮನೆಯವರು ಹೋಗಿ ಬಿಟ್ರಂತೆ. ಕತ್ತಲು ಕರಗಿ ಬೆಳಕು ಮೂಡುವಷ್ಟರಲ್ಲಿ ಎದುರು ಮನೆಯವರಿಗೆ ಕೊವಿಡ್-19 ಅಂಟಿಕೊಂಡಿದೆಯಂತೆ. ಸುತ್ತಲೂ ಇಂಥ ನೆಗೆಟಿವ್ ಸುದ್ದಿಗಳೇ ಹರಿದಾಡುತ್ತಿದ್ದವು. ಮೊನ್ನೆವರೆಗೂ ನಮ್ಮೊಂದಿಗೆ ಕುಳಿತು ಟೀ ಕುಡಿಯುತ್ತಿದ್ದ ಗೆಳಯ ಇಂದು ಮಹಾಮಾರಿಗೆ ಬಲಿಯಾಗಿದ್ದಾನೆ.
ನಮ್ಮವರು, ತಮ್ಮವರು ಎನ್ನುತ್ತಿದ್ದ ಊರಿನಲ್ಲಿ ನಾವ್ಯಾರೋ ನೀವ್ಯಾರೋ ಅನ್ನೋ ವಾತಾವರಣ ಸೃಷ್ಟಿಯಾಗಿದೆ. ಯಾರನ್ನು ಹತ್ತಿರ ಬಿಟ್ಟುಕೊಂಡ್ರೆ ಯಾವಾಗ ಯಾರ ಮೂಲಕ ಯಾರಿಗೆ ಕೊರೊನಾವೈರಸ್ ಸೋಂಕು ಅಂಟಿಕೊಳ್ಳುತ್ತದೆಯೋ ಎಂಬ ಭಯ. ಇಂಥ ಪರಿಸರದ ಮಧ್ಯೆಯೂ ಮನಸ್ಸಿನ ಧೈರ್ಯ, ಮೆದುಳಿನಲ್ಲಿ ಪಾಸಿಟಿವ್ ಆಲೋಚನೆ ನಮ್ಮನ್ನು ರಕ್ಷಿಸುತ್ತದೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣು ಮುಂದಿವೆ.
ಕೊರೊನಾವೈರಸ್ ಅಂಟಿಕೊಂಡಿತ್ತು. ನಮ್ಮನ್ನು ಕ್ವಾರೆಂಟೈನ್ ನಲ್ಲಿ ಇಟ್ಟಿದ್ದರು. ನಾವು ಹೋಮ್ ಕ್ವಾರೆಂಟೈನ್ ನಲ್ಲಿ ದಿನಗಳನ್ನು ಕಳೆದಿರುವುದು ಹೇಗೆ. ಇಂಥ ಸಾಲು ಸಾಲು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇವೆ. ಕೊರೊನಾ ಗೆದ್ದವರ ಕಥೆಗಳು ಇತ್ತೀಚಿಗೆ ಸರ್ವೇ ಸಾಮಾನ್ಯ. ಇಂಥದರ ಮಧ್ಯೆ ಒಂದೂವರೆ ವರ್ಷದಲ್ಲಿ ಒಂದೇ ಒಂದು ಬಾರಿಯೂ ಕೊವಿಡ್-19 ಸೋಂಕಿನ ಬಲೆಗೆ ಸಿಲುಕದೇ ಬದುಕು ಸಾಗಿಸಿದ ಹಾಗೂ ಸಾಗಿಸುತ್ತಿರುವವರ ಕಥೆ ನಮ್ಮಲ್ಲಿನ ಆತ್ಮಸ್ಥೈರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಚೀನಾದಲ್ಲಿ ಅಟ್ಟಹಾಸ ತೋರಿದ ಕೊರೊನಾವೈರಸ್ ಸೋಂಕು 2020ರ ಮಾರ್ಚ್ ವೇಳೆಗೆ ಭಾರತಕ್ಕೆ ಲಗ್ಗೆ ಇಟ್ಟಿತು. ಕರ್ನಾಟಕದ ಮಟ್ಟಿಗೆ ಮೊದಲು ಬೆಂಗಳೂರು ಕೊವಿಡ್-19 ಸೋಂಕಿನ ಹಾಟ್ ಸ್ಪಾಟ್ ಎನ್ನುವಂತಾಗಿದ್ದು. ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡ ಎಷ್ಟು ಜನರು ತಮ್ಮೂರಿನತ್ತ ಮುಖ ಮಾಡಿದರು. ಹೀಗಿ ಸಿಲಿಕಾನ್ ಸಿಟಿ ತೊರೆದು ತವರು ಸೇರಿದ ಕಾರ್ಮಿಕರ ಸಾಲಿನಲ್ಲಿ ನಾನೂ ಒಬ್ಬ. ಕಂಪನಿಯು ನೀಡಿದ ವರ್ಕ್ ಫ್ರಾಮ್ ಹೋಮ್ ಎಂಬ ಸಂವೀಜಿನಿಯು ಸಾಂಕ್ರಾಮಿಕ ರೋಗದಿಂದ ರಕ್ಷಿಸಿತು. ಇದರ ಹೊರತಾಗಿ ಕೊವಿಡ್-19 ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡುವುದು ಕೂಡಾ ಅನಿವಾರ್ಯವಾಯಿತು.
ಕೊರೊನಾವೈರಸ್ ರೋಗ ಸರ್ವಾಂತರಯಾಮಿ ಆಗಿ ದಿಲ್ಲಿಯಿಂದ ಹಳ್ಳಿವರೆಗೂ ಹರಡುತ್ತಿದೆ. ಹಾಗಿದ್ದ ಮೇಲೆ ಹಾವೇರಿ ಜಿಲ್ಲೆಯೊಂದು ಮಹಾಮಾರಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ. ಜಿಲ್ಲೆಯಲ್ಲೂ ಸಾವಿರ ಸಾವಿರ ಕೊವಿಡ್-19 ಪ್ರಕರಣಗಳು ದಾಖಲಾಗಿವೆ. ಒಂದು ಸಮಾಧಾನದ ವಿಷಯ ಎಂದರೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಈ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ತೀರಾ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಜನರ ಮುಂಜಾಗ್ರತೆ ಹಾಗೂ ಪ್ರಜ್ಞಾವಂತ ನಾಗರಿಕರ ನಿಯಮ ಪಾಲನೆಯು ಜಿಲ್ಲೆಯನ್ನು ಮಹಾಮಾರಿಯ ಅಟ್ಟಹಾಸದಿಂದ ಸ್ವಲ್ಪ ಮಟ್ಟಿಗೆ ಪಾರು ಮಾಡಿದೆ. ಆದರೆ ಕೊರೊನಾವೈರಸ್ ಎನ್ನುವುದು ಇಷ್ಟಕ್ಕೆ ಮುಗಿದ ಕಥೆಯಂತೂ ಅಲ್ಲವೇ ಅಲ್ಲ.
ಕೊರೊನಾವೈರಸ್ ಸೋಂಕಿನ ಭಯ ಜನರಲ್ಲಿ ಎಷ್ಟರ ಮಟ್ಟಿಗೆ ಹೊಕ್ಕಿದೆ ಎನ್ನುವುದಕ್ಕೆ ಬ್ಯಾಡಗಿ ನಗರದ ಖಾಲಿ ಖಾಲಿ ರಸ್ತೆಗಳು ಸಾಕ್ಷಿಯಾಗಿದ್ದವು. ಬಸ್ ಇಲ್ಲದ ಬಸ್ ನಿಲ್ದಾಣ, ಬಾಗಿಲು ಹಾಕಿದ ಅಂಗಡಿಗಳು, ಖಾಲಿ ಖಾಲಿ ಹೊಡೆಯುತ್ತಿರುವ ನಗರದ ಮುಖ್ಯರಸ್ತೆ. ಈ ದೃಶ್ಯಗಳು ಕೊವಿಡ್-19 ಬಗೆಗಿನ ಭಯವಷ್ಟೇ ಅಲ್ಲದೇ ಜನರ ಜಾಗೃತಿಗೆ ಹಿಡಿದ ಕೈಗನ್ನಡಿ ಎನ್ನುವಂತಿದೆ. ಕಟ್ಟುನಿಟ್ಟಿನ ನಿಯಮ ಪಾಲನೆಗೆ ನಗರ ಪೊಲೀಸರು ತೋರಿದ ಪ್ರಾಮಾಣಿಕ ಪ್ರಯತ್ನ ಹಾಗೂ ಕರ್ತವ್ಯದ ಕುರಿತ ಬದ್ಧತೆಯೂ ಕಾರಣ ಎಂದರೆ ಅತಿಶಯೋಕ್ತಿ ಎನ್ನಿಸದು.
ಸಾಮಾನ್ಯವಾಗಿ “ಭಯವೇ ಭೂತವಯ್ಯ” ಎನ್ನುವ ಮಾತನ್ನು ಕೇಳಿರುತ್ತೀರಿ. ಕೊರೊನಾವೈರಸ್ ಕಾಲದಲ್ಲಿ ಅದನ್ನು ಸಾಬೀತುಪಡಿಸುವುದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮೆದುರಿಗಿವೆ. 11 ರಿಂದ 15 ದಿನಗಳ ಚಿಕಿತ್ಸೆ ಕೊವಿಡ್-19 ರೋಗಿಗಳನ್ನೇ ಪ್ರಾಣಾಪಾಯದಿಂದ ಪಾರು ಮಾಡಿದೆ. ಆದರೆ ಕೊರೊನಾ ಸೋಂಕು ತಗುಲಿದೆ ಎಂಬ ವರದಿ ಹೊರ ಬರುತ್ತಿದ್ದಂತೆ ಅದೆಷ್ಟು ರೋಗಿಗಳು ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದಾರೆ. ಕೊವಿಡ್-19 ಸೋಂಕಿನ ಕುರಿತಾಗಿ ಜನರಲ್ಲಿ ಹುಟ್ಟಿಕೊಂಡಿರುವ ಭಯ ಅಷ್ಟರ ಮಟ್ಟಿಗಿದೆ. ಮಹಾಮಾರಿ ಬಗ್ಗೆ ಜನರು ಭಯ ಬಿಟ್ಟರೆ ಅರ್ಧದಷ್ಟು ಸಾವಿನ ಸಂಖ್ಯೆ ಕಡಿಮೆಯಾಗುತ್ತದೆ.
ಮನೆಯಿಂದ ಹೊರಗೆ ಹೋದರೆ ಕೊರೊನಾವೈರಸ್ ಸೋಂಕಿನ ಭೀತಿ. ಹಾಗೆಂದು ದಿನವಿಡೀ ನಾಲ್ಕು ಗೋಡೆಗಳ ಮಧ್ಯೆ ಸಮಯ ಕಳೆಯುವುದಕ್ಕೆ ಹೇಳುವುದು ಸುಲಭ. ಅದನ್ನು ಪಾಲಿಸುವುದು ಅಷ್ಟೇ ಕಷ್ಟಸಾಧ್ಯವಾಗಿರುತ್ತದೆ. ಇಂಥ ಸಮಯದಲ್ಲಿ ನಮ್ಮವರಿಗೆ ಸಮಯವನ್ನು ನೀಡೋಣ. ನಮ್ಮವರೊಂದಿಗೆ ಸ್ವಲ್ಪ ಬೆರೆಯೋಣ. ನಾಲ್ಕು ಗೋಡೆಗಳ ಮಧ್ಯೆ ಬದುಕಿನ ಸಾರವನ್ನು ಸವಿಯುವ ಮನರಂಜನೆ, ಕ್ರೀಡೆಗಳತ್ತ ಚಿತ್ತವನ್ನು ಹರಿಸೋಣ. ಚಿತ್ತ ಚಂಚಲತೆಯನ್ನು ತೊಡೆದು ಹಾಕಲು ಮನಸಿಗೆ ಮನರಂಜನೆ ಬಲುಮುಖ್ಯ. ಕೊರೊನಾವೈರಸ್ ಬಗೆಗಿನ ಆತಂಕವನ್ನು ದೂರ ಮಾಡಲು ಇರುವ ಮತ್ತೊಂದು ಮಾರ್ಗವೇ ಕ್ರೀಡೆ. ಈ ಕ್ರೀಡೆ ಮತ್ತು ಮನರಂಜನೆಗಳು ಮನಸ್ಸನ್ನು ಮತ್ತಷ್ಟು ಉಲ್ಲಾಸಭರಿತಗೊಳಿಸುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನು ನೀವೂ ಒಮ್ಮೆ ಪ್ರಯತ್ನಿಸಿ ನೋಡಿ.
ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಡುವುದಕ್ಕೆ ಸರ್ಕಾರ ಸಾಕಷ್ಟು ಮಾರ್ಗೋಪಾಯಗಳನ್ನು ಸೂಚಿಸಿದೆ. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿ, ಅನಗತ್ಯೆ ಮನೆಯಿಂದ ಹೊರ ಬರಬೇಡಿ ಕೊವಿಡ್-19 ಬಗ್ಗೆ ಜಾಗೃತರಾಗಿರಿ ಎಂಬ ಸಂದೇಶಗಳು ಪ್ರತಿ ಬಾರಿ ಮೊಬೈಲ್ ಕಾಲರ್ ಟ್ಯೂನ್ ಮೂಲಕ ನಮ್ಮನ್ನು ಎಚ್ಚರಿಸುತ್ತದೆ. ಇದರ ಜೊತೆ ಯೋಗಾಸನ, ಪ್ರಾಣಾಯಾಮ ಮಾನಸಿಕ ಸ್ಥೈರ್ಯವನ್ನು ತುಂಬುತ್ತದೆ. ಕೊರೊನಾವೈರಸ್ ಕುರಿತು ಭಯದ ಬದಲಿಗೆ ಮಹಾಮಾರಿಯನ್ನು ಎದುರಿಸಬಲ್ಲೇ ಎಂಬ ಆತ್ಮವಿಶ್ವಾಸ ಜನರ ಜೀವವನ್ನು ಉಳಿಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು