News Karnataka Kannada
Saturday, April 20 2024
Cricket
ವಿದೇಶ

ಕೇರಳಕ್ಕೆ ಇಂದು ಕಾಲಿಡಲಿರುವ ಮುಂಗಾರು ; ಮೂರು ದಿನ ನಂತರ ರಾಜ್ಯ ಪ್ರವೇಶ

Photo Credit :

ಕೇರಳಕ್ಕೆ ಇಂದು ಕಾಲಿಡಲಿರುವ ಮುಂಗಾರು ; ಮೂರು ದಿನ ನಂತರ ರಾಜ್ಯ ಪ್ರವೇಶ

ಬೆಂಗಳೂರು: ಹವಾಮಾನ ವರದಿಗಳ ನಿರೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಮುಂಗಾರು ಆರಂಭವಾಗಲು ಇನ್ನು ಮೂರ್ನಾಲ್ಕು ದಿನಗಳಷ್ಟೇ ಬಾಕಿ ಇದೆ. ಕೇರಳಕ್ಕೆ ಇಂದು (ಜೂನ್​ ) ನೈರುತ್ಯ ಮಾರುತಗಳು ಪ್ರವೇಶಿಸಲಿದ್ದು, 3ರಿಂದ 4ದಿನಗಳ ಅಂತರದಲ್ಲಿ ಅಂದರೆ ಜೂನ್​ 6ಅಥವಾ 7ರಂದು ಕರ್ನಾಟಕಕ್ಕೆ ಮುಂಗಾರು ಕಾಲಿಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಲೆಕ್ಕಾಚಾರಗಳು ತಿಳಿಸಿವೆ. ತೌಕ್ತೆ ಹಾಗೂ ಯಾಸ್​ ಚಂಡಮಾರುತದ ಪರಿಣಾಮ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗಿರುವುದರಿಂದ ಈಗಾಗಲೇ ಭೂಮಿ ತಕ್ಕಮಟ್ಟಿಗೆ ಮೆದುವಾಗಿದೆ. ಈಗ ಅರಬ್ಬಿ ಸಮುದ್ರದ ಮಧ್ಯ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರವಾಗಿರುವುದರಿಂದ ಕರ್ನಾಟಕದ ಕೆಲವೆಡೆ ಜೂನ್ 1ರಿಂದ ಮತ್ತೆ ಮಳೆಯಾಗುತ್ತಿದೆ. ಈ ವಾತಾವರಣ ಇನ್ನೂ 4 ದಿನ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ವರದಿಗಳ ಪ್ರಕಾರ ಜೂನ್​ 6ರ ತನಕವೂ ರಾಜ್ಯಾದ್ಯಂತ ಗುಡುಗು ಸಹಿತ ಮಳೆ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ. ಇಂದು ಮತ್ತು ನಾಳೆ ಗುಡುಗು, ಸಿಡಿಲಿನೊಂದಿಗೆ ಭಾರೀ ಮಳೆ ಸುರಿಯುವ ನಿರೀಕ್ಷೆಯಿದ್ದು ಒಟ್ಟು 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೀದರ್, ಗದಗ , ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಕಲಬುರ್ಗಿ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ಕೊಡಗು, ಹಾಸನ, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್​ ಘೋಷಣೆಯಾಗಿದೆ.
ಮಲೆನಾಡು ಸೇರಿದಂತೆ ಕೆಲ ಪ್ರದೇಶಗಳಲ್ಲಿ ಮೇ ತಿಂಗಳ ವಾತಾವರಣವೇ ಹೆಚ್ಚೂಕಡಿಮೆ ಮಳೆಗಾಲದಂತೆ ಆಗಿತ್ತು. ಇದೀಗ ಮುಂಗಾರು ಪ್ರವೇಶವೂ ಸನಿಹವಾಗಿರುವುದರಿಂದ ಮಳೆಗಾಲದ ಕಾರ್ಯಗಳಿಗೆ ಜನರು ಲಾಕ್​ಡೌನ್​ ನಡುವೆಯೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಲೆಕ್ಕಾಚಾರದ ಪ್ರಕಾರ ಜೂನ್​ 1ರಂದೇ ಕೇರಳ ಪ್ರವೇಶಿಸಬೇಕಿದ್ದ ಮುಂಗಾರು ಕೊಂಚ ತಡವಾಗಿ ಆಗಮಿಸುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಜೂನ್​ 6 ಅಥವಾ 7ರ ವೇಳೆಗೆ ಮುಂಗಾರು ಆರಂಭಗೊಳ್ಳಲಿದೆ.
ಇಂದಿನಿಂದ ಮೂರು ದಿನಗಳ ಕಾಲ ಅಂದರೆ ಜೂನ್ 5ರ ತನಕ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿಯೂ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಈಗಾಗಲೇ ಕೇರಳ, ಅಸ್ಸಾಂ, ಮೇಘಾಲಯ, ಆಂಧ್ರಪ್ರದೇಶದ ಕರಾವಳಿ ಪ್ರದೇಶ, ಅರುಣಾಚಲ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದು, ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಇಂದು ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಹವಾಮಾನ ವರದಿಗಳು ತಿಳಿಸಿರುವಂತೆ ಇಂದು ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್, ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್, ಚಿಕ್ಕಮಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ತಾಪಮಾನ ಕೊಂಚ ಹೆಚ್ಚಿರಲಿದ್ದು, ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್, ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್, ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು