News Karnataka Kannada
Tuesday, April 23 2024
Cricket
ವಿದೇಶ

ಕರ್ನಾಟಕದ ಹೊಸ ಮುಖ್ಯಮಂತ್ರಿ ಹೆಸರು ಘೋಷಿಸಲಿರುವ ಪ್ರಧಾನಿ ಮೋದಿ!

Photo Credit :

ಕರ್ನಾಟಕದ ಹೊಸ ಮುಖ್ಯಮಂತ್ರಿ ಹೆಸರು ಘೋಷಿಸಲಿರುವ ಪ್ರಧಾನಿ ಮೋದಿ!

ಬೆಂಗಳೂರು, : ವಯೋ ಸಹಜ ಕಾರಣದಿಂದ ಬಿ.ಎಸ್.ಯಡಿಯೂರಪ್ಪ ಅವರ ಸಿಎಂ ಪಟ್ಟದಿಂದ ಕೆಳಗೆ ಇಳಿಯಲಿದ್ದಾರೆ. ಅಂದುಕೊಂಡಂತೆ ಆದಲ್ಲಿ ಜೂನ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ‘ಯಂಗ್ ಸಿಎಂ’ ಹೆಸರನ್ನು ಪ್ರಧಾನಿ ಮೋದಿ ಅವರೇ ಘೊಷಣೆ ಮಾಡಲಿದ್ದಾರೆ. ಆ ಅಚ್ಚರಿಯ ಹೊಸ ಸಿಎಂ ಯಾರು ಅಂತ ಈವರೆಗೂ ಯಾರಿಗೂ ಗುಟ್ಟು ಬಿಟ್ಟು ಕೊಟ್ಟಿಲ್ಲ .
ಹೌದು. ಬಿಜೆಪಿ ವಲಯದಲ್ಲಿ ಬಹು ಚರ್ಚೆಗೆ ಕಾರಣವಾಗಿರುವ ವಿಚಾರವಿದು. ಬಿಜೆಪಿ ಪಕ್ಷದ ನೀತಿ ಸಂಹಿತೆ ಪ್ರಕಾರ 75 ವರ್ಷ ಮೇಲ್ಪಟ್ಟವರು ಸಿಎಂ ಆಗುವಂತಿಲ್ಲ. ಯಡಿಯೂರಪ್ಪ ಮಾತ್ರ ಆ ವಿಚಾರದಲ್ಲಿ ಅದೃಷ್ಟವಂತರು. ಅವರು ಬಿಜೆಪಿ ಪಕ್ಷ ಕಟ್ಟಲು ಮಾಡಿದ್ದ ತ್ಯಾಗ ತೆಗೆದುಕೊಂಡ ಪರಿಶ್ರಮ ಲೆಕ್ಕ ಹಾಕಲು ಸಾಧ್ಯವಿಲ್ಲ. ಸದ್ಯ 79 ವರ್ಷ ಗಟಿ ದಾಟುತ್ತಿರುವ ಯಡಿಯೂರಪ್ಪ ನಂಥ ನಾಯಕ ಬಿಜೆಪಿಯಲ್ಲಿ ಹುಡುಕಿದರೂ ಸಿಗಲ್ಲ.ಅವರಲ್ಲಿ ಈ ಮೊದಲು ಇದ್ದ ಜನಪರ ಕಾಳಜಿ ಸಮಾಜವಾದದ ತತ್ವ, ರೈತ ಪರ ಕಾಳಜಿ, ಪಕ್ಷ ಕಟ್ಟಲು ಅವರು ಹಾಕಿದ ಪರಿಶ್ರಮಕ್ಕೆ ಪಕ್ಷವೂ ಅಷ್ಟೇ ನಿಷ್ಠಾವಂತಿಕೆ ತೋರಿದೆ. ಹೀಗಾಗಿಯೇ ಯಡಿಯೂರಪ್ಪ ಪಕ್ಷದ ವಯೋ ನೀತಿ ಮಿರಿಯೂ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವಕಾಶ ಕಲ್ಪಿಸಿದೆ.
ಯಡಿಯೂರಪ್ಪ ಒಬ್ಬರ ಮಾತು ಕೇಳಿ ಆಡಳಿತ ನೀಡುವ ನಾಯಕ ಅಲ್ಲ ಎಂಬುದು ಬಿಜೆಪಿಯ ಎಲ್ಲಾ ನಾಯಕರಿಗೆ ಗೊತ್ತು. ವಯೋ ಸಹಜ ಸಮಸ್ಯೆ, ಪುತ್ರನ ಹಸ್ತಕ್ಷೇಪ, ಮಂತ್ರಿ ಮಂಡಲದ ಅಸಮರ್ಥ ಆಡಳಿತ, ಭ್ರಷ್ಟಾಚಾರ ಆರೋಪ, ಎಲ್ಲದಕ್ಕೂ ಮಿಗಿಲಾಗಿ ಬಿಎಸ್ ವೈ ಅವರಲ್ಲಿದ್ದ ಸಮಾಜಿಕ ಕಳಕಳಿ ಸತ್ತುಹೋದ ಪರಿಣಾಮ ಅನಿವಾರ್ಯವಾಗಿ ಅವಧಿ ಪೂರೈಸುವ ಮೊದಲೇ ಸಿಎಂ ಪಟ್ಟ ತ್ಯಾಗ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಯಡಿಯೂರಪ್ಪ ಕೂಡ ಸಿಎಂ ಕುರ್ಚಿ ತ್ಯಜಿಸಲು ಸಮ್ಮತಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಕರ್ನಾಟಕದ ಹೊಸ ಮುಖ್ಯಮಂತ್ರಿಯ ಹುಡುಕಾಟದಲ್ಲಿ ಕೇಂದ್ರ ವರಿಷ್ಠರು ತೊಡಗಿದ್ದಾರೆ. ಆದರೆ, ಯಡಿಯೂರಪ್ಪನ ಗಟ್ಟಿ ನಾಯಕತ್ವ ಇರುವ ಒಬ್ಬ ವ್ಯಕ್ತಿ ಬಿಜೆಪಿಯಲ್ಲಿ ಕಾಣದಿರುವುದು ವರಿಷ್ಠರಿಗೂ ತಲೆ ಬಿಸಿಯಾಗಿದೆ. ಹೀಗಾಗಿಯೇ ಆಪರೇಷನ್ ಕಮಲ ಸರ್ಕಾರ ಬಂದ ಆರು ತಿಂಗಳ ನಂತರ ಬದಲಾಗಬೇಕಿದ್ದ ಯಡಿಯೂರಪ್ಪ ಈವರೆಗೂ ಮುಂದುವರೆದಿದ್ದು ಎಂಬುದರಲ್ಲಿ ಎರಡು ಮಾತಿಲ್ಲ.
ಮುಂದಿನ ಚುನಾವಣೆಯನ್ನು ಮನಸಲ್ಲಿ ಇಟ್ಟುಕೊಂಡು ಕೇಂದ್ರ ವರಿಷ್ಠರು ಸಿಎಂ ಆಯ್ಕೆಗೆ ಹೊರಟಿದ್ದಾರೆ. ಅದರಲ್ಲಿ ಇರುವ ನಾಯಕರ ಪೈಕಿ ಸಂಸದ ಪ್ರಹ್ಲಾದ ಜೋಶಿ ಹೆಸರು ಮೊದಲಿನಿಂದಲೂ ಕೇಳಿ ಬಂದಿತ್ತು ಸಿಎಂ ಅವರ ಸಚಿವ ಸಂಪುಟದಲ್ಲಿ ಕೆಲಸ ಮಾಡಿದ ಅನುಭವ. ಸಮಾಧಾನಕರ ಮನಸ್ಥಿತಿ, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬಲ್ಲ ನಾಯಕ ಎಂದೇ ಬಿಂಬಿತವಾಗಿದ್ದರು. ಬದಲಾದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಇದೀಗ ನಿಜವಾದ ನಾಯಕನ ಬದಲಿಗೆ ರಾಜ್ಯದ ಪ್ರಭಾವಿ ಜಾತಿ ಆಧಾರಿತ ನಾಯಕನ ಅನಿವಾರ್ಯತೆಗೆ ಬಿಜೆಪಿ ನಾಯಕರು ಬಿದ್ದಂತೆ ಕಾಣುತ್ತಿದ್ದಾರೆ. ಹೀಗಾಗಿ ಪ್ರಹ್ಲಾದ ಜೋಶಿ ಸಿಎಂ ಆಗುತ್ತಾರೆ ಎಂಬ ಮಾತುಗಳು ತೆರೆ ಮರೆಗೆ ಸರಿದಿವೆ. ಆ ಸ್ಥಾನದಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ, ಸಿ.ಟಿ. ರವಿ, ಲಿಂಗಾಯತ ಸಮುದಾಯಕ್ಕೆ ಸೇರಿದ ಮುರುಗೇಶ ನಿರಾಣಿ ಅವರ ಹೆಸರು ತಳಕು ಹಾಕಿಕೊಂಡಿದೆ. ರಾಜ್ಯದಲ್ಲಿ ಪ್ರಭಾವಿ ಸಮುದಾಯದ ನಾಯಕನಿಗೆ ಪಟ್ಟ ಕಟ್ಟಿ ಕನಿಷ್ಠ ಆ ಸಮುದಾಯದ ಮನ ಗೆಲ್ಲುವ ಅನಿವಾರ್ಯತೆಗೆ ಬಿಜೆಪಿ ತೀರ್ಮಾನಿಸಿದಂತಿದೆ.
ಸೈಕಲ್ ತುಳಿದು ಬಿಜೆಪಿ ಪಕ್ಷದ ಬಾವುಟ ವಿಧಾನಸೌಧದ ಮೇಲೆ ಹಾರಿಸಿದ ಕೀರ್ತಿ ಯಡಿಯೂರಪ್ಪಗೆ ಸಲ್ಲುತ್ತದೆ. ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸುವಾಗ ರೈತರನ್ನು ಪ್ರತಿನಿಧಿಸಿ ಹಸಿರು ಶಾಲು ಹೊದ್ದು ಅನ್ನದಾತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಕುಸಿದು ಬಿದ್ದ ನಂತರ ಬಿಜೆಪಿ ಪಕ್ಷ ಅಧಿಕಾರ ಹಿಡಿಯುವ ಮಟ್ಟಿಗೆ ಹೋರಾಟ ನಡೆಸಿ ಜಯ ಸಾಧಿಸಿದರು. ಮುಖ್ಯಮಂತ್ರಿಯೂ ಆದರು. ಅವರ ದುರಾದೃಷ್ಟ ಯಾವಾಗಲೋ ಮಾಡಿದ ಒಂದು ತಪ್ಪು ಜೈಲಿಗೆ ಹೋಗುವಂತಾಯಿತು. ಅಲ್ಲಿಂದ ಈಚೆಗೆ ಬಿಜೆಪಿ ಪಕ್ಷದ ವತಿಯಿಂದ ಜಗದೀಶ ಶೆಟ್ಟರ್, ಸದಾನಂದಗೌಡ ಸಿಎಂ ಆದರೂ ಮತ್ತೆ ಸಿಎಂ ಪಟ್ಟ ದಕ್ಕಿಸಿಕೊಂಡಿದ್ದು ಮಾತ್ರ ಯಡಿಯೂರಪ್ಪ. ಒಬ್ಬ ನಾಯಕ ಅಲ್ಲ ಅಂತಿದ್ದರೆ ಸಿಎಂ ಪಟ್ಟ ಬಿಟ್ಟುಕೊಟ್ಟು ಮತ್ತೆ ಸಿಎಂ ಪಟ್ಟ ಏರಲು ಸಾಧ್ಯವಿಲ್ಲ. ಅದೂ ಬಿಜೆಪಿಯಂಥ ಪಕ್ಷದಲ್ಲಿ.
ಯಡಿಯೂರಪ್ಪ ಸಿಎಂ ಆಗಿ ರೈತರ ಸಾಲ ಮನ್ನಾ ಮಾಡಿದರು. ಶಾಲಾ ಹೆಣ್ಣು ಮಕ್ಕಳಿಗೆ ಸೈಕಲ್ ಯೋಜನೆ ತಂದರು. ಹೆಣ್ಣು ಮಗು ಜನಿಸಿದವರಿಗೆ ಭಾಗ್ಯ ಲಕ್ಷ್ಮೀ ಬಾಂಡ್ ಘೋಷಣೆ ಮಾಡಿದರು. ಯಡಿಯೂರಪ್ಪ ಜಾರಿಗೆ ತಂದ ಯೋಜನೆಗಳನ್ನು ನೆರೆ ರಾಜ್ಯಗಳು ಅನುಕರಣೆ ಮಾಡಿದವು. ಬಡ ವರ್ಗದ ಜತೆ ಬದುಕಿ ಅವರ ಬಗ್ಗೆ ಕಾಳಜಿ ಇದ್ದರೆ ಮಾತ್ರ ಇಂಥ ಸಮುದಾಯ ಪ್ರೀತಿ ಮಹತ್ವದ ಯೋಜನೆಗಳನ್ನು ಸಮಾಜಕ್ಕೆ ಕೊಡಲಿಕ್ಕೆ ಸಾಧ್ಯ. ಆ ವಿಚಾರದಲ್ಲಿ ಹಿಂದಿನ ಯಡಿಯೂರಪ್ಪ ನಿಜವಾಗಿಯೂ ಪ್ರಶ್ನಾತೀತ ನಾಯಕನೇ ಎಂಬುದರಲ್ಲಿ ಅನುಮಾನವೇ ಬೇಡ. ಆದರೆ ಬದಲಾದ ಕಾಲ, ಸನ್ನಿವೇಶಗಳು ಯಡಿಯೂರಪ್ಪ ಅವರ ವರ್ಚಸ್ಸನ್ನು ಕಡಿಮೆ ಮಾಡಿತು.
ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಮುರಿಯುವ ಅವಕಾಶ ಬಳಸಿಕೊಂಡು ಸಿಎಂ ಪಟ್ಟಕ್ಕೆ ಏರಿದ್ದು ಯಡಿಯೂರಪ್ಪ ಅವರ ವರ್ಚಸ್ಸಿಗೆ ಬಹು ದೊಡ್ಡ ಪೆಟ್ಟು ನೀಡಿತು. ಸಿಎಂ ಆದರೂ ಸಹ ಸಮರ್ಥ ಸಚಿವ ಸಂಪುಟ ಕಟ್ಟುವಲ್ಲಿ ವಿಫಲರಾದರು. ಒಬ್ಬ ತಂದೆಯಾಗಿ ಮಕ್ಕಳಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡುವುದರಲ್ಲಿ ತಪ್ಪೇನಿರಲಿಲ್ಲ. ಆದರೆ, ಪುತ್ರ ವಿಜಯೇಂದ್ರನ ಅತಿ ಹಸ್ತಕ್ಷೇಪ ಬಿಜೆಪಿ ಶಾಸಕರ ವಲಯದಲ್ಲಿಯೇ ಅಸಮಾಧಾನಕ್ಕೆ ಕಾರಣವಾಯಿತು. ವಲಸೆ ನಾಯಕರನ್ನು ತಲೆ ಮೇಲೆ ಕೂರಿಸಿಕೊಂಡು ಉನ್ನತ ಸ್ಥಾನಗಳನ್ನು ಕೊಟ್ಟು ಮೂಲ ಬಿಜೆಪಿಯವರನ್ನು ಕಡೆಗಣಿಸಿದರು.ಯಡಿಯೂರಪ್ಪ ದುರಾದೃಷ್ಟಕ್ಕೆ, ಅತಿ ವೃಷ್ಟಿ, ಕೊರೊನಾವೈರಸ್, ಬ್ಲ್ಯಾಕ್ ಫಂಗಸ್ ರೋಗಗಳು ರಾಜ್ಯವನ್ನೇ ನಲುಗಿಸಿದವು. ಯಡಿಯೂರಪ್ಪನ ಮಂತ್ರಿ ಮಂಡಲ ಅವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲವಾಯಿತು. ಯಡಿಯೂರಪ್ಪಗೆ ವಯೋ ಸಹಜ ಸಮಸ್ಯೆಗಳು ಎದುರಾದವು. ಹೀಗಾಗಿ ಅನಿವಾರ್ಯವಾಗಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆ ತ್ಯಜಿಸಬೇಕಾದ ಪರಿಸ್ಥಿತಿ ಬಂದಿದೆ. ಆದರೆ ಜನಪರ ಕಾಳಜಿಯಿದ್ದ ಯಡಿಯೂರಪ್ಪ ಮಾದರಿ ಆಡಳಿತ ನೀಡಬಲ್ಲ, ಪಕ್ಷ ಕಟ್ಟಬಲ್ಲ ಒಬ್ಬೇ ಒಬ್ಬ ನಾಯಕ ಕೂಡ ಬಿಜೆಪಿಯಲ್ಲಿ ಸದ್ಯದ ಮಟ್ಟಿಗೆ ಗೋಚರಿಸುತ್ತಿಲ್ಲ. ಹೀಗಾಗಿ ಸಿಎಂ ಪಟ್ಟಕ್ಕಾಗಿ ಸೂಕ್ತ ನಾಯಕನಿಗಾಗಿ ಅನ್ವೇಷಣೆ ಮುಂದುವರೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು