News Karnataka Kannada
Thursday, April 25 2024
ವಿದೇಶ

ಆಸ್ಪತ್ರೆ ದುರಂತ ದಾಖಲೆ ತಿರುಚಿದ ಸಂಶಯ ವ್ಯಕ್ತಪಡಿಸಿದ ತ್ರಿಸದಸ್ಯ ಸಮಿತಿ

Photo Credit :

 ಆಸ್ಪತ್ರೆ ದುರಂತ ದಾಖಲೆ ತಿರುಚಿದ ಸಂಶಯ ವ್ಯಕ್ತಪಡಿಸಿದ  ತ್ರಿಸದಸ್ಯ ಸಮಿತಿ

ಚಾಮರಾಜನಗರ : ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ಮೇ ೨ ರಂದು ಆಮ್ಲಜನಕ ಕೊರತೆಯಿಂದ 24 ಮಂದಿ ಮೃತಪಟ್ಟ ದುರಂತಕ್ಕೆ ಸಂಬಂಧಿಸಿದ ಕೆಲ ದಾಖಲೆಗಳನ್ನು ತಿರುಚಲಾಗಿದೆ’ ಎಂದು ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ನೇತೃತ್ವದ ತ್ರಿಸದಸ್ಯ ಸಮಿತಿಯು ಸಂಶಯ ವ್ಯಕ್ತಪಡಿಸಿದೆ. ಅಲ್ಲದೆ ಈ ದುರಂತಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡು ಸಂರಕ್ಷಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ ಎಂದು ತಿಳಿದು ಬಂದಿದೆ.
ಸಮಿತಿಯು ಹೈ ಕೋರ್ಟೊಗೆ ಸಲ್ಲಿಸಿರುವ ವರದಿಯ ಪ್ರಕಾರ ದ್ರವೀಕೃತ ವೈದ್ಯಕೀಯ ಆಮ್ಲಜನಕ (ಎಲ್‌ಎಂಒ) ನಿರ್ವಹಣೆಯ ರಿಜಿಸ್ಟರ್ ಪುಸ್ತಕ ಗಮನಿಸಿದರೆ ದಾಖಲೆ ತಿರುಚಿರುವುದು ಗಮನಕ್ಕೆ ಬರುತ್ತಿದೆ ಎಂದು ಹೇಳಿದೆ. 6 ಕಿಲೋ ಲೀಟರ್ ಸಾಮರ್ಥ್ಯದ ಎಲ್‌ಎಂಒ ಟ್ಯಾಂಕ್ ಅನ್ನು ಕೆಲ ದಿನಗಳ ಹಿಂದೆ ಆಸ್ಪತ್ರೆ ಆವರಣದಲ್ಲಿ ಅಳವಡಿಸಲಾಗಿದೆ. ಆದರೂ, ಈ ಟ್ಯಾಂಕ್‌ಗೆ ಮೊದಲ ಬಾರಿಗೆ 2021ರ ಏಪ್ರಿಲ್ 29ರಂದು ಎಲ್‌ಎಂಒ ತುಂಬಿಸಲಾಗಿದೆ. ಬಳಿಕ ಮೇ 1ರಂದು ಎರಡನೇ ಬಾರಿ ತುಂಬಿಸಲಾಗಿದೆ. ಆದರೆ, 30 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಅದು ಖಾಲಿಯಾಗಿದೆ ಎಂದು ದಾಖಲಿಸಲಾಗಿದೆ.‘ಏ.29ರಿಂದ ಎಲ್‌ಎಂಒ ನಿರ್ವಹಿಸುತ್ತರುವ ರಿಜಿಸ್ಟರ್ ಪುಸ್ತಕ ಮತ್ತು ಬಯೋ ಮೆಡಿಕಲ್ ಎಂಜಿನಿಯರ್ ನಿರ್ವಹಿಸುತ್ತಿರುವ ಆಮ್ಲಜನಕ ಬಳಕೆ ರಿಜಿಸ್ಟರ್ ಪುಸ್ತಕಗಳನ್ನು ಗಮನಿಸಿದರೆ ದಾಖಲೆಗಳನ್ನು ನಾಶ ಮಾಡಿರುವುದು ಗಮನಕ್ಕೆ ಬರುತ್ತದೆ. ಎಲ್‌ಎಂಒ ರಿಜಿಸ್ಟರ್ ಪುಸ್ತಕದಲ್ಲಿನ ಪುಟ ಸಂಖ್ಯೆ 3 ಮತ್ತು 4 ಕಾಣೆಯಾಗಿದೆ’ ಎಂದು ವರದಿ ಹೇಳಿದೆ. ‘ಮೈಸೂರು ಜಿಲ್ಲಾಸ್ಪತ್ರೆಯಲ್ಲಿ 40 ಸಿಲಿಂಡರ್ ಲಭ್ಯವಿದ್ದರೂ, ಮೇ 3ರ ಬೆಳಿಗ್ಗೆ 6 ಗಂಟೆಗಷ್ಟೇ ಅವು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ತಲುಪಿವೆ. ಸಿಸಿಟಿವಿ ದೃಶ್ಯಗಳು ಮತ್ತು ಹಾರ್ಡ್ ಡಿಸ್ಕ್‌ಗಳನ್ನು ಸಂರಕ್ಷಣೆ ಮಾಡಬೇಕು’ ಎಂದು ಮುಖ್ಯ ಕಾರ್ಯದರ್ಶಿಗೆ ಸಮಿತಿ ಶಿಫಾರಸು ಮಾಡಿದೆ. ‘ದುರಂತಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದು ಸಂರಕ್ಷಣೆ ಮಾಡಬೇಕು’ ಎಂದು ಮುಖ್ಯ ನ್ಯಾಯಮುರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದಕುಮಾರ್ ಅವರನ್ನು ಒಳಗೊಂಡ ಪೀಠ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿತು.
‘ಮೃತಪಟ್ಟವರಿಗೆ ಸಂಬಂಧಿಸಿದ ಕೇಸ್ ಶೀಟ್‌ಗಳಲ್ಲೂ ವ್ಯತ್ಯಾಸ ಆಗಿರುವುದು ಗಮನಕ್ಕೆ ಬಂದಿದೆ. 28 ಕೇಸ್ ಶೀಟ್‌ಗಳನ್ನು ಒಬ್ಬ ವೈದ್ಯರೇ ದಾಖಲಿಸಿದ್ದರೆ, ಒಂದು ಕೇಸ್‌ ಶೀಟ್ ಅನ್ನು ಮಾತ್ರ ಬೇರೆ ವೈದ್ಯರು ನಮೂದಿಸಿದ್ದಾರೆ. ಸಾವಿನ ಸಮಯ ಮತ್ತು ದಿನಾಂಕ ಸೇರಿ ಕೆಲ ವಾಸ್ತವ ವಿವರಗಳನ್ನು ಉಲ್ಲೇಖಿಸಿಲ್ಲ. ಮುದ್ರಿತ ಕೆಲ ಕಾಲಂಗಳು ಖಾಲಿ ಇದ್ದರೂ ವೈದ್ಯಾಧಿಕಾರಿ ಸಹಿ ಒಳಗೊಂಡಿದೆ’ ಎಂದು ವರದಿ ತಿಳಿಸಿದೆ. ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಮಂದಿನ ವಿಚಾರಣೆಯೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿತು. ಸರ್ಕಾರದ ನಿರ್ಲಕ್ಷ್ಯದಿಂದ ಸಂಭವಿಸಿದ ಸಾವುಗಳಿಗೆ ಪರಿಹಾರ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶವನ್ನು ನೆನಪಿಸಿದ ಪೀಠ, ‘ಸಂವಿಧಾನದ ಪರಿಚ್ಛೇದ 21ರ ಅಡಿಯಲ್ಲಿನ ಜೀವಿಸುವ ಮೂಲಭೂತ ಹಕ್ಕಿನ ಉಲ್ಲಂಘನೆ ಆಗಿರುವ ಕಾರಣ ಪರಿಹಾರ ನೀಡಬೇಕು’ ಎಂದು ಹೇಳಿತು.
ಇದಲ್ಲದೆ ಆಮ್ಲಜನಕ ದುರಂತ ಕುರಿತು ಸತ್ಯ ಶೋಧನೆಗೆ ಹೈಕೋರ್ಟ್ ನೇಮಿಸಿದ್ದ ಮೂವರು ಸದಸ್ಯರ ಸಮಿತಿಯು ನೀಡಿರುವ ವರದಿಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಕ್ಲೀನ್‌ಚಿಟ್‌ ನೀಡಿರುವುದಕ್ಕೆ ಜಿಲ್ಲೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.ಸತ್ಯ ಶೋಧನಾ ಸಮಿತಿಯಿಂದ ಪೂರ್ಣಪ್ರಮಾಣದ ಸತ್ಯಾಂಶ ಹೊರಬಂದಿಲ್ಲ. ಮೌಖಿಕ ಆದೇಶದ ಮೂಲಕ ಆಕ್ಸಿಜನ್‌ ತಡೆ ಹಿಡಿದ ಮೈಸೂರು ಜಿಲ್ಲಾಧಿಕಾರಿಯನ್ನು ತಪ್ಪಿತಸ್ಥರೆಂದು ಪರಿಗಣಿಸಿಲ್ಲ. ಸಚಿವರಾದ ಡಿ.ಸುಧಾಕರ್‌ ಹಾಗೂ ಎಸ್‌.ಸುರೇಶ್‌ಕುಮಾರ್‌ ಅವರ ಪಾತ್ರವನ್ನೂ ಉಲ್ಲೇಖಿಸಿಲ್ಲ ಎಂದು ಜಿಲ್ಲೆಯ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕನ್ನಡ ಚಳವಳಿಗಾರ ಶಾ ಮುರಳಿ, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಪ್ರಭಾವಿ ರಾಜಕಾರಣಿಗಳ ಬೆಂಬಲ ಹಾಗೂ ಒಡನಾಟ ಇರುವುದರಿಂದ ಅವರ ಹೆಸರನ್ನು ಕೈಬಿಡಲಾಗಿದೆ. ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಿದ್ದರೆ ಸತ್ಯಾಂಶ ಹೊರಬರುತ್ತಿತ್ತು. ನಿವೃತ್ತ ನ್ಯಾಯಮೂರ್ತಿಗಳಿಗೆ ಒತ್ತಡ ಹಾಕುವ ಸಾಧ್ಯತೆಗಳಿರುತ್ತವೆ ಎಂದು ಅವರು ಹೇಳಿದರು.ಮೌಖಿಕ ಆದೇಶದ ಮೂಲಕ ಜಿಲ್ಲೆಗೆ ಬರಬೇಕಿದ್ದ ಆಕ್ಸಿಜನ್‌ ತಡೆ ಹಿಡಿದ ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರದು ಶೇ 25ರಷ್ಟು ತಪ್ಪಿದೆ ಹಾಗಾಗಿ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಕಡ್ಡಾಯ ರಜೆ ಮೇಲೆ ಕಳುಹಿಸಬೇಕು. ಅವರ
ಮೊಬೈಲ್‌ ಹಾಗೂ ದೂರವಾಣಿಗಳ ಕರೆಗಳ ವಿವರವನ್ನು ಕಲೆಹಾಕಿ ಕೂಲಂಕಷವಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಮುಕ್ತವಾದ ತನಿಖೆ ನಡೆದು ಸತ್ಯಾಂಶ ಹೊರಬರಲಿ ಎಂದು ಜಯಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ.ಬಂಗಾರು ಒತ್ತಾಯಿಸಿದರು.
ಮೈಸೂರು ಜಿಲ್ಲಾಧಿಕಾರಿಗೆ ಕ್ಲೀನ್‌ಚಿಟ್‌ ನೀಡಿದ್ದು ಸರಿಯಲ್ಲ. ಅವರ ಪಾತ್ರದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಕೇವಲ ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ತಪ್ಪಿತಸ್ಥರಲ್ಲ. ಘಟನೆಗೆ ಆರೋಗ್ಯ ಸಚಿವ ಡಿ.ಸುಧಾಕರ್‌, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ಹಾಗೂ ಸರ್ಕಾರವೂ ನಿರ್ಲಕ್ಷ್ಯವೂ ಕೂಡ ಕಾರಣವಾಗಿದೆ ಹಾಗಾಗಿ ಸಮಗ್ರ ತನಿಖೆ ನಡೆಯಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಬದಲಾಯಿಸಿ ಸ್ಥಳೀಯ ನಾಯಕರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು ಎಂದು ಕನ್ನಡ ಸೇನೆ ರಾಜ್ಯಾಧ್ಯಕ್ಷ ಶ್ರೀನಿವಾಸ ಗೌಡ ಪ್ರತಿಕ್ರಿಯಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು