News Karnataka Kannada
Friday, April 19 2024
Cricket
ವಿದೇಶ

ಅಂಬಾನಿ ಮನೆ ಬಳಿ ವಾಹನದಲ್ಲಿ ಬಾಂಬ್‌ ಪತ್ತೆ : ಇನ್ಸ್‌ಪೆಕ್ಟರ್‌ ಸಚಿನ್‌ ಸೇವೆಯಿಂದ ವಜಾ

Photo Credit :

ಅಂಬಾನಿ ಮನೆ  ಬಳಿ ವಾಹನದಲ್ಲಿ ಬಾಂಬ್‌ ಪತ್ತೆ  :  ಇನ್ಸ್‌ಪೆಕ್ಟರ್‌ ಸಚಿನ್‌  ಸೇವೆಯಿಂದ ವಜಾ

ಮುಂಬೈ, : ಉದ್ಯಮಿ ಮುಖೇಶ್ ಅಂಬಾನಿ‌ ಅವರ ನಿವಾಸ ‘ಆಂಟಿಲಿಯಾ’ ಹೊರಗೆ ಪತ್ತೆಯಾದ ಸ್ಫೋಟಕ ಹೊಂದಿದ್ದ ವಾಹನಕ್ಕೆ ಸಂಬಂಧಿಸಿದ ಪ್ರಕರಣ ಹಾಗೂ ಪೊಲೀಸ್‌ ಅಧಿಕಾರಿಗಳನ್ನು ಬಳಸಿಕೊಂಡು 100 ಕೋಟಿ ರು ಅಧಿಕ ಮೊತ್ತದ ಹಫ್ತಾ ವಸೂಲಿ ಪ್ರಕರಣ ಹಣ ಸಂಗ್ರಹಿಸಿದ ಆರೋಪಗಳಲ್ಲಿ ಸಿಲುಕಿ ಅಮಾನತುಗೊಂಡಿರುವ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಸಚಿನ್ ವಾಜೆ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಫೆಬ್ರವರಿ 25ರಂದು ದಕ್ಷಿಣ ಮುಂಬೈನಲ್ಲಿರುವ ಮುಕೇಶ್ ಅಂಬಾನಿ ಅವರ ಅಂಟಿಲಿಯಾ ನಿವಾಸದ ಎದುರು ಸ್ಫೋಟಕಗಳು ಹಾಗೂ ಬೆದರಿಕೆ ಪತ್ರವಿದ್ದ ಸ್ಕಾರ್ಪಿಯೋ ವಾಹನ ಪತ್ತೆಯಾಗಿತ್ತು. ಅದರ ಮೂಲ ಮಾಲೀಕ ಥಾಣೆಯ ನಿವಾಸಿ ಮನ್ಸುಖ್ ಹಿರೇನ್, ತಮ್ಮ ವಾಹನ ಕಳುವಾಗಿತ್ತು ಎಂದು ಹೇಳಿದ್ದರು. ಮಾರ್ಚ್ 5ರಂದು ಥಾಣೆಯ ಕೊಳ್ಳವೊಂದರಲ್ಲಿ ಅವರ ಶವ ಪತ್ತೆಯಾಗಿತ್ತು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ನಿಗೂಢ ರೀತಿಯಲ್ಲಿ ಮೃತಪಟ್ಟ ಆಟೊ ಬಿಡಿಭಾಗಗಳ ಮಾರಾಟಗಾರ ಮನ್ಸುಖ್ ಹಿರೇನ್ ಸಾವಿಗೆ ಸಚಿನ್ ಕಾರಣ ಎಂದು ಮನ್ಸುಖ್ ಪತ್ನಿ ಆರೋಪಿಸಿದ್ದರು. ವಿಚಾರಣೆಗೆ ಹಾಜರಾಗಿದ್ದ ಸಚಿನ್ ಅವರನ್ನು ನಂತರ ಬಂಧಿಸಲಾಗಿತ್ತು.
ಪೀಟರ್ ನ್ಯೂಟನ್ ಎಂಬುವವರು ಈ ಸ್ಕಾರ್ಪಿಯೋ ಕಾರ್‌ನ ಮೂಲ ಮಾಲೀಕ. ಆದರೆ ಅವರ ಸಮ್ಮತಿಯೊಂದಿಗೆ ಮೂರು ವರ್ಷಗಳಿಂದ ಅದನ್ನು ತಾವು ಬಳಸುತ್ತಿದ್ದುದ್ದಾಗಿ ಮನ್ಸುಖ್ ಪತ್ನಿ ವಿಮಲಾ ತಿಳಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ತಮ್ಮ ಗಂಡನಿಂದ ಇನ್‌ಸ್ಪೆಕ್ಟರ್ ವಾಜೆ ಸ್ಕಾರ್ಪಿಯೋವನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಕೆಲವು ತಿಂಗಳ ಬಳಿಕ ಅದನ್ನು ವಾಪಸ್ ನೀಡಿದ್ದರು ಎಂದು ಹೇಳಿದ್ದಾರೆ. ‘2020ರ ನವೆಂಬರ್‌ನಲ್ಲಿ ಸಚಿನ್ ವಾಜೆ ಸ್ಕಾರ್ಪಿಯೋ ತೆಗೆದುಕೊಂಡು ಹೋಗಿದ್ದರು. ನನ್ನ ಪತಿ ಅವರಿಗೆ ಬಹುಕಾಲದಿಂದ ಪರಿಚಯ. ಫೆ. 2ರಂದು ವಾಜೆ ಅವರು ತಮ್ಮ ಚಾಲಕ ಮೂಲಕ ಕಾರನ್ನು ಮರಳಿಸಿದ್ದರು. ಬಳಿಕ ಅದನ್ನು ನನ್ನ ಪತಿ ನಿತ್ಯ ಬಳಸುತ್ತಿದ್ದರು. ಆದರೆ ಅದರಲ್ಲಿ ತಾಂತ್ರಿಕ ಸಮಸ್ಯೆಗಳು ಬರುತ್ತಿದ್ದವು. ಫೆ. 17ರಂದು ಮುಂಬೈ ಕಡೆಗೆ ಹೋಗುವಾಗ ವಿಖ್ರೋಲಿ ಪ್ರದೇಶದ ಬಳಿ ಚಕ್ರಗಳು ಜಾಮ್ ಆಗಿದ್ದರಿಂದ ಅಲ್ಲಿಯೇ ನಿಲ್ಲಿಸಿ ಮನೆಗೆ ವಾಪಸ್ ಆಗಿದ್ದರು. ಆದರೆ ಮರು ದಿನ ಅಲ್ಲಿಗೆ ಹೋದಾಗ ಕಾರು ಇರಲಿಲ್ಲ. ಈ ಬಗ್ಗೆ ವಿಖ್ರೋಲಿ ಪೊಲೀಸರಿಗೆ ದೂರು ಕೂಡ ಸಲ್ಲಿಸಿದ್ದರು’ ಎಂದು ಅವರು ವಿವರಿಸಿದ್ದಾರೆ.
‘ನನ್ನ ಪತಿಯ ದೇಹ ಪತ್ತೆಯಾದಾಗ ಅವರ ಮುಖದ ಸುತ್ತಲೂ ಒಂದು ಸ್ಕಾರ್ಫ್ ಇತ್ತು. ಚೆನ್ನಾಗಿ ಸುತ್ತಿದ ಐದಾರು ಸ್ಕಾರ್ಫ್‌ಗಳು ಅವರ ಜೇಬಿನಲ್ಲಿದ್ದವು. ನನ್ನ ಪತಿ ಒಳ್ಳೆಯ ಈಜುಗಾರ. ಅವರು ಮುಳುಗಿ ಸಾಯಲು ಸಾಧ್ಯವೇ ಇಲ್ಲ. ಅವರು ಮನೆಯಿಂದ ಹೋಗುವಾಗ ಕಪ್ಪು ಮಾಸ್ಕ್ ಧರಿಸಿದ್ದರು. ಮೊಬೈಲ್ ಫೋನ್, ಚಿನ್ನದ ಸರ, ವಾಚ್, ಪರ್ಸ್, ವಿವಿಧ ಎಟಿಎಂ ಕಾರ್ಡ್‌ಗಳು ಮತ್ತು ಸ್ವಲ್ಪ ಹಣ ಇತ್ತು. ಆದರೆ ಅವರ ಮೃತದೇಹದೊಂದಿಗೆ ಇದಾವುದೂ ಇರಲಿಲ್ಲ. ಹೀಗಾಗಿ ನನ್ನ ಗಂಡನನ್ನು ಕೊಲೆ ಮಾಡಲಾಗಿದೆ ಎಂದು ನಂಬುತ್ತೇನೆ. ಪೊಲೀಸ್ ಅಧಿಕಾರಿ ಸಚಿನ್ ವೇಜ್ ಅವರೇ ನನ್ನ ಗಂಡನನ್ನು ಕೊಂದಿರಬಹುದು’ ಎಂದು ಅವರು ಆರೋಪಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ(ಎಟಿಎಸ್) ದಳದ ಅಧಿಕಾರಿಗಳು ಕಳೆದ ವಾರವೇ ಸಚಿನ್ ವಾಜೆ ಹೇಳಿಕೆ ದಾಖಲಿಸಿಕೊಂಡಿದ್ದರು. ಮನ್ಸುಖ್ ಬಳಿ ಇದ್ದ ಎಸ್‌ಯುವಿ ಬಳಕೆ ಮಾಡಿಲ್ಲ ಎಂದು ವಾಜೆ ಹೇಳಿದ್ದರು. ಇದಾದ ಬಳಿಕ ಬಂಧನದ ಭೀತಿ ಎದುರಾಗಿ, ಥಾಣೆ ಕೋರ್ಟಿನಲ್ಲಿ ಬಂಧನ ಮಾಡದಂತೆ ಜಾಮೀನು ಕೋರಿದ್ದರು. ಆದರೆ, ಕೊಲೆ, ಸಾಕ್ಷ್ಯ ನಾಶದಂಥ ಗುರುತರ ಆರೋಪವಿದ್ದು, ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತ್ತು
ಎನ್‌ಕೌಂಟರ್ ತಜ್ಞರಾಗಿದ್ದ ಸಚಿನ್ ವಾಜೆ ಸುಮಾರು 63 ಎನ್‌ಕೌಂಟರ್‌ಗಳಲ್ಲಿ ಪಾಲ್ಗೊಂಡಿದ್ದರು. 2004ರಲ್ಲಿ ಖ್ವಾಜಾ ಯೂನುಸ್ ಎಂಬಾತನ ಲಾಕಪ್ ಡೆತ್ ಕೇಸಿನಲ್ಲಿ ಆರೋಪಿಯಾಗಿ ವಾಜೆ ಸೇವೆಯಿಂದ ಅಮಾನತುಗೊಂಡಿದ್ದರು. ಜೂನ್ 2020ರಲ್ಲಿ ಕರ್ತವ್ಯಕ್ಕೆ ಪುನಃ ಮರಳಿದ್ದರು. ಮುಂಬೈ ಕ್ರೈಂ ವಿಭಾಗದ ಸಿಐಯುನಲ್ಲಿದ್ದ ವಾಜೆ ಅವರು ಬಿಜೆಪಿಯ ತೀವ್ರ ಆಕ್ರೋಶ ಎದುರಿಸಬೇಕಾಯಿತು. ನಂತರ ನಾಗರಿಕ ಸೌಲಭ್ಯ ಕೇಂದ್ರ(ಸಿಎಫ್ ಸಿ) ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಟಿಆರ್‌ಪಿ ಹಗರಣ, ನಕಲಿ ಸಾಮಾಜಿಕ ಜಾಲ ತಾಣ ಹಿಂಬಾಲಕ ಸೃಷ್ಟಿ ಕೇಸ್, ದಿಲೀಪ್ ಛಾಬ್ರಿಯಾ ಕಾರು ವಿನ್ಯಾಸ ಹಗರಣ ಮುಂತಾದ ಹೈ ಪ್ರೊಫೈಲ್ ಕೇಸುಗಳನ್ನು ವಾಜೆ ನಿಭಾಯಿಸುತ್ತಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು