ನವದೆಹಲಿ: ಹಳೆ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಇಂದು ನಡೆದ ಎನ್‌ಡಿಎ ಸಂಸದೀಯ ಸಭೆಯಲ್ಲಿನ ನಿತೀಶ್ ಕುಮಾರ್ ಹಾಗೂ ನರೇಂದ್ರ ಮೋದಿಯ ವಿಡಿಯೋವೊಂದು ವೈರಲ್ ಆಗುತ್ತಿದೆ.
ಸಭೆಯಲ್ಲಿ ಇಂದು ಪ್ರಧಾನಿ ಸ್ಥಾನಕ್ಕೆ ಅನುಮೋದನೆ ನೀಡಲಾಯಿತು. ಸಭೆಯಲ್ಲಿದ್ದ ಘಟಾನುಘಟಿ ನಾಯಕರೆಲ್ಲರೂ ನರೇಂದ್ರ ಮೋದಿಯವರ ಹೆಸರನ್ನೇ ಪ್ರಧಾನಿ ಸ್ಥಾನಕ್ಕೆ ಅನುಮೋದಿಸಿದರು.
ಅನುಮೋದನೆಯ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೆಡಿಯು ವರಿಷ್ಠ ನಿತೀಶ್ ಕುಮಾರ್ ಅವರು ತನ್ನ ಹೇಳಿಕೆಗಳಿಂದ ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದರು.
ತನ್ನ ಮಾತುಗಳನ್ನು ಮುಗಿಸುತ್ತಿದ್ದಂತೆಯೇ ನಿತೀಶ್ ಕುಮಾರ್ ಅವರು ಕೈ ಮುಗಿಯುತ್ತಲೇ ನರೇಂದ್ರ ಮೋದಿಯವರ ಬಳಿ ತೆರಳುತ್ತಾರೆ. ನಂತರ ಮೋದಿ ಕಾಲಿಗೆ ನಮಸ್ಕರಿಸಲು ಪ್ರಯತ್ನಿಸುತ್ತಾರೆ.
ಈ ವೇಳೆ ಮೋದಿಯವರು ನಿತೀಶ್ ಅವರನ್ನು ತಡೆಯುತ್ತಾರೆ. ಇದಾದ ಬಳಿಕ ಇಬ್ಬರೂ ಒಬ್ಬರಿಗೊಬ್ಬರು ಸಮಸ್ಕರಿಸುತ್ತಾ ಹಸ್ತಲಾಘವ ಮಾಡುತ್ತಾರೆ. ಇದರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗಿಂತ ಸರಿಸುಮಾರು ಆರು ತಿಂಗಳು ಹಿರಿಯರು ಎಂದು ಹೇಳಲಾಗುತ್ತಿದೆ.ಇದಕ್ಕೂ ಮುನ್ನ ಮಾತನಾಡಿದ್ದ ನಿತೀಶ್ ಕುಮಾರ್, ಬಿಹಾರದ ಎಲ್ಲಾ ಬಾಕಿ ಕೆಲಸಗಳನ್ನು ಮಾಡಲಾಗುವುದು. ನಾವೆಲ್ಲರೂ ಒಗ್ಗೂಡಿರುವುದು ಬಹಳ ಒಳ್ಳೆಯ ವಿಷಯ ಮತ್ತು ನಾವೆಲ್ಲರೂ ನಿಮ್ಮೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ.
ಮೋದಿ ಅವರೇ ನೀವು ಭಾನುವಾರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೀರಿ. ನೀವು ಪ್ರಮಾಣ ವಚನ ಸ್ವೀಕರಿಸಿದಾಗಲೆಲ್ಲಾ ನಾವು ನಿಮ್ಮೊಂದಿಗೆ ಇರುತ್ತೇವೆ. ನಿಮ್ಮ ನಾಯಕತ್ವದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಕಳೆದ 10 ವರ್ಷಗಳಿಂದ ಮೋದಿ ಪ್ರಧಾನಿ ಆಗಿದ್ದರು. ಇದೀಗ ಮತ್ತೆ ಪ್ರಧಾನಿ ಆಗ್ತಿದ್ದಾರೆ ಎಂದು ತಿಳಿಸಿದರು.