ನವದೆಹಲಿ: ನರೇಂದ್ರ ಮೋದಿಯವರು ಜೂನ್ 9 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದು ಹೀಗಾಗಿ ರಾಷ್ಟ್ರಪತಿ ಭವನದಲ್ಲಿ ಬಹು ಹಂತದ ಭದ್ರತೆಯನ್ನು ಕಲ್ಪಿಸಲಾಗಿದೆ.
ರಾಷ್ಟ್ರಪತಿ ಭವನದ ಸುತ್ತ ಅರೆಸೇನಾ ಪಡೆ ಸಿಬ್ಬಂದಿ, ಎನ್‍ಎಸ್‍ಜಿ ಕಮಾಂಡೋಗಳು, ಡ್ರೋನ್‍ಗಳು ಮತ್ತು ಸ್ನೈಪರ್‌ಗಳ ಬಹು ಹಂತದ ಭದ್ರತೆಯನ್ನು ಕಲ್ಪಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರಪತಿ ಭವನದ ಆವರಣದ ಒಳಗೆ ಮತ್ತು ಹೊರಗೆ ಮೂರು ಹಂತದ ಭದ್ರತೆಯನ್ನು ಹೊಂದಿರುತ್ತದೆ. ದೆಹಲಿ ಪೊಲೀಸ್ ಸಿಬ್ಬಂದಿಯನ್ನು ಹೊರ ಆವರಣದಲ್ಲಿ ನಿಯೋಜಿಸಲಾಗುವುದು ಮತ್ತು ಅರೆಸೇನಾ ಸಿಬ್ಬಂದಿಯನ್ನು ಭವನದ ಆಂತರಿಕ ಭದ್ರತೆಗೆ ನಿಯೋಜಿಸಲಾಗಿದೆ. ದೆಹಲಿ ಸಶಸ್ತ್ರ ಪೊಲೀಸ್ (ಡಿಎಪಿ) ಜವಾನರು ಸೇರಿದಂತೆ ಸುಮಾರು 2500 ಪೊಲೀಸ್ ಸಿಬ್ಬಂದಿಯನ್ನು ಸ್ಥಳದ ಸುತ್ತಲೂ ನಿಯೋಜಿಸಲು ಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾದೇಶ, ಶ್ರೀಲಂಕಾ, ಮಾಲ್ಡೀವ್ಸ್, ಭೂತಾನ್, ನೇಪಾಳ, ಮಾರಿಷಸ್ ಮತ್ತು ಸೆಶೆಲ್ಸ್‌ನ ಉನ್ನತ ನಾಯಕರು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ನಗರದ ಲೀಲಾ, ತಾಜ್, ಐಟಿಸಿ ಮೌರ್ಯ, ಕ್ಲಾರಿಡ್ಜಸ್ ಮತ್ತು ಒಬೆರಾಯ್ ಹೋಟೆಲ್‍ಗಳಲ್ಲಿ ಈಗಾಗಲೇ ಭದ್ರತೆ ಕೈಗೊಳ್ಳಲಾಗಿದೆ.
ಸಾರ್ಕ್ (ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘ) ರಾಷ್ಟ್ರಗಳ ಗಣ್ಯರನ್ನು ಸಮಾರಂಭಕ್ಕೆ ಆಹ್ವಾನಿಸಿರುವುದರಿಂದ ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಪ್ರಮಾಣ ವಚನದಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಅವರ ಹೋಟೆಲ್‍ಗಳಿಂದ ರಾಷ್ಟ್ರಪತಿ ಭವನಕ್ಕೆ ತೆರಳಲು ಮತ್ತು ಹಿಂತಿರುಗಲು ನಿಗದಿತ ಮಾರ್ಗವನ್ನು ಸೂಚಿಸಲಾಗುತ್ತದೆ.
ಗಣ್ಯರ ಮಾರ್ಗಗಳಲ್ಲಿ ಸ್ನೈಪರ್‌ಗಳು ಮತ್ತು ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಮತ್ತು ಹೊಸ ದೆಹಲಿ ಜಿಲ್ಲೆಯ ಆಯಕಟ್ಟಿನ ಸ್ಥಳಗಳಲ್ಲಿ ಡ್ರೋನ್‍ಗಳನ್ನು ನಿಯೋಜಿಸಲಾಗುವುದು.