ಮಧ್ಯಪ್ರದೇಶ: ಇಲ್ಲೋಂದು ಕಾಳಿಂಗ ಸರ್ಪ ಹಾವು ಹಿಡಿಯುವವನನ್ನು ಕಚ್ಚಿ ನಂತರ ತಾನೇ ಜೀವ ಬಿಟ್ಟ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಾಗರ್ ನಲ್ಲಿ ಬೆಳಕಿಗೆ ಬಂದಿದೆ.ಹಾವು ಕಚ್ಚಿದ ನಂತರ ಹಾವು ಹಿಡಿಯುವವನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗ ಅವನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾನೆ ಎಂಬುದಾಗಿ ತಿಳಿದುಬಂದಿದೆ.
ನಮ್ಮ ಹಿರಿಯರು ಹೇಳುವ ಪ್ರಕಾರ ಕಾಳಿಂಗ ಸರ್ಪ ಎಷ್ಟು ವಿಷಕಾರಿ ಎಂದರೆ ಅದು ಕಚ್ಚಿದರೆ ಬಲಿಪಶುವಿಗೆ ಸಾಯುವ ಮೊದಲು ನೀರು ಕೇಳುವ ಅವಕಾಶವೂ ಇರುವುದಿಲ್ಲ ಎನ್ನುತ್ತಾರೆ. ಆದರೆ ಇಲ್ಲಿ ನಡೆದ ಘಟನೆ ಮಾತ್ರ ಬಹಳ ಆಶ್ಚರ್ಯಕರವಾಗಿದೆ. ವರದಿಗಳ ಪ್ರಕಾರ, ನಾರಾಯಣಾವಳಿಯ ಸಾಗರ್-ಖುರೈ ರಸ್ತೆಯ ತಡೆಗೋಡೆಯ ಬಳಿ ಜನರು ಈ ಕಾಳಿಂಗ ಸರ್ಪವನ್ನು ನೋಡಿದ್ದಾರೆ, ನಂತರ ಅವರು ತಕ್ಷಣ ಚಂದ್ರಕುಮಾರ್ ಅಹಿರ್ವಾರ್ ಎಂಬ ಹಾವು ಹಿಡಿಯುವವರಿಗೆ ಮಾಹಿತಿ ನೀಡಿದ್ದಾರೆ. ಅವನು ಸ್ಥಳಕ್ಕೆ ಬಂದು 5 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆಹಿಡಿದಿದ್ದಾನೆ. ಆಗ ಕೋಪಗೊಂಡ ಹಾವು ಚಂದ್ರಕುಮಾರನ ಎರಡೂ ಕೈ ಹೆಬ್ಬೆರಳುಗಳನ್ನು ಕಚ್ಚಿತು. ಹಾಗಾಗಿ ಚಂದ್ರಕುಮಾರ್ ಭಾಗ್ಯೋದಯ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾಯಿತು.
ಆದರೆ ಇತ್ತ ಹಾವನ್ನು ಅವನು ಹಾವನ್ನು ಸೆರೆ ಹಿಡಿದು ಪ್ಲಾಸ್ಟಿಕ್ ಪೆಟ್ಟಿಗೆಯಲ್ಲಿ ಹಾಕಿದ್ದ. ಅಲ್ಲಿ ಗಾಳಿಯಾಡಲು ಯಾವುದೇ ರಂಧ್ರಗಳಿರಲಿಲ್ಲ. ಇದರ ಪರಿಣಾಮವಾಗಿ ಹಾವು ಉಸಿರಾಡಲು ಸಾಧ್ಯವಾಗದೆ ಪ್ರಾಣ ಬಿಟ್ಟಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.