ಭಾರತದ ಮೊದಲ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಕೆಎಂ ಕಾರಿಯಪ್ಪ ಮತ್ತು ಮಾಜಿ ಮುಖ್ಯಸ್ಥ ಜನರಲ್ ಕೆಎಸ್ ತಿಮಯ್ಯ ಅವರ ಬಗ್ಗೆ ವಕೀಲರೊಬ್ಬರು ಅವಹೇಳನಕಾರಿ ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶನಿವಾರ ಸಂಜೆ ವಕೀಲರನ್ನು ಪೊಲೀಸರು ಬಂಧಿಸಿದ್ದಾರೆ.
ಸಪ್ತ ಸಾಗರ ಎಂಬ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಶ್ರಿವತ್ಸ ಭಟ್ ಎಂಬುವವರು ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಬಗ್ಗೆ ನಿಂದಿಸಿ ಪೋಸ್ಟ್ ಮಾಡಿದ್ದರು. ಬಳಿಕ ಇದರ ಸ್ಕ್ರೀನ್ ಶಾಟ್ ಎಲ್ಲಾ ಕಡೆ ವೈರಲ್ ಆಗಿದ್ದು, ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಅಲ್ಲದೇ ಶ್ರಿವತ್ಸ ಭಟ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿತ್ತು. ಅದರಂತೆ ನಿನ್ನೆ ಸಂಜೆ ಮಡಿಕೇರಿ ಮೂಲದ ವಕೀಲ ಕೆಆರ್ ವಿದ್ಯಾಧರ್ ಅವರನ್ನು ಕೊಡಗು ಜಿಲ್ಲೆಯ ಸುಂಟಿಕೊಪ್ಪ ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದಾರೆ.
ಗೋಣಿಕೊಪ್ಪದಲ್ಲಿ ಯುನೈಟೆಡ್ ಕೊಡವ ಆರ್ಗನೈಸೇಶನ್ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಮತ್ತೊಂದು ದೂರು ಸಲ್ಲಿಸಿದರೆ, ಕೊಡವಮೇರ ಕೊಂಡಾಟದ ಚಾಮೇರ ದಿನೇಶ್ ಬೆಳ್ಳಿಯಪ್ಪ ನೇರವಾಗಿ ಕೊಡಗು ಎಸ್ಪಿಗೆ ದೂರು ಸಲ್ಲಿಸಿದರು. ಈ ಹಿನ್ನಲೆ ಕೆಆರ್ ವಿದ್ಯಾಧರ್ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 192, 353(2), ಮತ್ತು 319 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ, ಹೆಚ್ಚಿನ ತನಿಖೆಗಳು ನಡೆಯುತ್ತಿವೆ.