ಢಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರೋ ಮೀಸಲಾತಿ ವಿರೋಧಿ ಹೋರಾಟ ತೀವ್ರಗೊಂಡಿದೆ. ಈ ಮೀಸಲಾತಿ ವಿರೋಧಿ ಹೋರಾಟ ಹಿಂಸಾಚಾರಕ್ಕೆ ತಿರುಗಿದೆ. ಇದರ ಮಧ್ಯೆ ಎಚ್ಚೆತ್ತ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಪತ್ರ ಎಸೆದು ದೇಶದಿಂದ ಕಾಲ್ಕಿತ್ತಿದ್ದಾರೆ. ಹಾಗಾಗಿ ಬಾಂಗ್ಲಾದೇಶದಲ್ಲಿ ಸೇನೆ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆ ಆಗಲಿದೆ ಎಂದು ಆರ್ಮಿ ಚೀಫ್ ಜನರಲ್ ವಕಾರ್ ಉಜ್ ಜಮಾನ್ ಬಹಿರಂಗ ಘೋಷಣೆ ಮಾಡಿದ್ದಾರೆ.
ಇದರ ಮಧ್ಯೆ ಕೆಲವು ಕಿಡಿಗೇಡಿಗಳು ಸ್ಟಾರ್ ಕ್ರಿಕೆಟರ್ ಮಶ್ರಫೆ ಮೊರ್ತಜಾ ಅವರ ಮನೆಗೆ ಬೆಂಕಿ ಇಟ್ಟು ಸುಟ್ಟು ಹಾಕಿದ್ದಾರೆ. ಮಶ್ರಫೆ ಮೊರ್ತಜಾ ಅವರು ಪ್ರಧಾನಿ ಶೇಖ್ ಹಸೀನಾ ಬೆಂಬಲಿಗರು ಆಗಿದ್ದು, ಹಾಗಾಗಿ ಇವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಮಶ್ರಫೆ ಮೊರ್ತಜಾ ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟರ್. ತನ್ನ ಶ್ರೇಷ್ಠ ನಾಯಕತ್ವ ಮತ್ತು ಕ್ರಿಕೆಟ್ ಕೌಶಲ್ಯದಿಂದ ಗಮನ ಸೆಳೆದವರು. ಮೊರ್ತಜಾ 2001ರಲ್ಲಿ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಜೀವನವನ್ನು ಆರಂಭಿಸಿದರು. ತಮ್ಮ ವೇಗದ ಬೌಲಿಂಗ್‌ನಿಂದಲೇ ಅಲ್ಲದೆ ಧೈರ್ಯಶಾಲಿ ಬ್ಯಾಟಿಂಗ್ ಕೌಶಲ್ಯದಿಂದಲೂ ಗಮನ ಸೆಳೆದರು. 2009ರಲ್ಲಿ ಮೊರ್ತಜಾ ಬಾಂಗ್ಲಾದೇಶದ ಏಕದಿನ ಕ್ರಿಕೆಟ್ ತಂಡದ ನಾಯಕತ್ವವನ್ನು ಸ್ವೀಕರಿಸಿದರು.