SUNK

ಈಜಲು ಹೋದ ಬಾಲಕರು ನೀರು ಪಾಲು

ರಾಮನಗರ: ತಾಲ್ಲೂಕಿನ ಬಿಡದಿ ಸಮೀಪದ ಕೆಂಚನಕುಪ್ಪೆ ಗ್ರಾಮದ ಕುಂಬಾರಕಟ್ಟೆಯಲ್ಲಿ ಈಜಲು ಹೋದ ಇಬ್ಬರು ಶಾಲಾ ಬಾಲಕರು ನೀರು ಪಾಲಾಗಿರುವ ಘಟನೆ ನಡೆದಿದೆ. ಬಿಡದಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಕೌಶಿಕ್(11) ಮತ್ತು ಕರ್ಣ(12) ಮೃತ ಬಾಲಕರು. ಇಬ್ಬರೂ ಬಿಡದಿ ಪಟ್ಟಣದ ಇಂದಿರಾನಗರ ನಿವಾಸಿಯಾಗಿದ್ದಾರೆ. ಕೌಶಿಕ್ ತಂದೆ ಉಮೇಶ್ ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿದ್ದು ದಿನಪತ್ರಿಕೆಗಳನ್ನು ಮಾರಾಟ ಮಾಡುತ್ತಾರೆ. ಕರ್ಣನ ತಂದೆ ಗುಂಡಪ್ಪ ಎಂಬುವರು ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗದ ಕಾರಣ ಕೌಶಿಕ್ ಮನೆಯಲ್ಲಿಯೇ ಉಳಿದುಕೊಂಡಿದ್ದು, ಕರ್ಣ ಶಾಲೆ ಬಿಟ್ಟಿದ್ದನು. ಇಬ್ಬರೂ ಸ್ನೇಹಿತರಾಗಿದ್ದು ಜೊತೆಯಲ್ಲಿಯೇ ಓಡಾಡುತ್ತಿದ್ದರು. ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಕುಂಬಾರಕಟ್ಟೆ ಭರ್ತಿಯಾಗಿತ್ತು. ಗುರುವಾರ ಮಧ್ಯಾಹ್ನ ಕಟ್ಟೆಯಲ್ಲಿ ಈಜಾಡುತ್ತಿದ್ದ ಬಾಲಕರನ್ನು ಸ್ಥಳೀಯರು ಗದರಿಸಿ ಮನೆಗೆ ಕಳುಹಿಸಿದ್ದರು.  ನಂತರ ಮತ್ತೆ ವಾಪಸ್ ಬಂದ ಬಾಲಕರು ಕಟ್ಟೆಯಲ್ಲಿ ಈಜಾಡಲು ಹೋಗಿ ನೀರಿನ ಆಳ ಅರಿಯದೆ ಕೆಸರಿನಲ್ಲಿ ಸಿಲುಕಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕುಂಬಾರ ಕಟ್ಟೆಯಲ್ಲಿ ಶವಗಳು ತೇಲುತ್ತಿದ್ದುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬಿಡದಿ ಪೋಲಿಸರು ಪರಿಶೀಲನೆ ನಡೆಸಿದರು. ನುರಿತ ಈಜುಗಾರರಿಂದ ಬಾಲಕರ ಮೃತ ದೇಹಗಳನ್ನು ಹೊರಗೆ ತೆಗೆಯಲಾಯಿತು.

3 years ago