ಢಾಕಾ: ಬಹುನಿರೀಕ್ಷಿತ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ಆತಿಥ್ಯದಲ್ಲಿ ನಡೆಯಲಿದೆ. ಆದರೆ, ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಅಲ್ಲಿನ ನಾಗರೀಕರು ನಡೆಸುತ್ತಿರುವ ಪ್ರತಿಭಟನೆ, ಗಲಭೆಗಳು ಹಿಂಸಾತ್ಮಕ ರೂಪ ತಳೆದ ಕಾರಣ ಶೇಕ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಕಳೆದ ಸೋಮವಾರ (ಆ.04) ಭಾರತಕ್ಕೆ ಪಲಾಯನ ಮಾಡಿದ್ದರು.
ಹೊಸ ಸರ್ಕಾರ ರಚನೆಯಾಗಿದ್ದರೂ ಕೂಡ ಹಿಂಸಾತ್ಮಕ ಘಟನೆಗಳು ಇನ್ನೂ ನಡೆಯುತ್ತಲೇ ಇದೆ. ಹೀಗಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸೇನೆಯ ನೆರವು ಕೋರಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸೇನಾ ಮುಖ್ಯಸ್ಥ ಜನರಲ್ ವಕಾರ್ ಜಮಾನ್ ಅವರಿಗೆ ಪತ್ರ ಬರೆದಿದ್ದು, ಬಾಂಗ್ಲಾದೇಶದಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ನಡೆಸಿಕೊಡಲು ಸಹಾಯ ಮಾಡಬೇಕು ಎಂದು ಕೋರಿದೆ.
ಐಸಿಸಿ ಕೂಡ ಬಾಂಗ್ಲಾದೇಶದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಒಂದೊಮ್ಮೆ ಬಾಂಗ್ಲಾದೇಶದಲ್ಲಿ ಶಾಂತಿ ನೆಲೆಸದೇ ಹೋದರೆ, ಭದ್ರತಾ ಕಾರಣದಿಂದ ಟೂರ್ನಿಯನ್ನು ಬಾಂಗ್ಲಾದೇಶದಿಂದ ಬೇರೆ ದೇಶಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಟೂರ್ನಿ ಸ್ಥಳಾಂತರಗೊಂಡರೆ ಭಾರತದಲ್ಲಿ ನಡೆಯಲಿದೆ ಎನ್ನಲಾಗಿದೆ. ಸದ್ಯ ಸೇನೆ ಢಾಕಾದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.