ಇದೇ ಅಕ್ಟೋಬರ್ 3 ರಿಂದ ಆರಂಭವಾಗಲಿರುವ ಮಹಿಳೆಯರ ಟಿ20 ವಿಶ್ವಕಪ್ಗೆ ಯುಎಇ ಆತಿಥ್ಯವಹಿಸುತ್ತಿದೆ. ವಾಸ್ತವವಾಗಿ ಈ ಟೂರ್ನಿ ಈ ಮೊದಲು ಬಾಂಗ್ಲಾದೇಶದಲ್ಲಿ ನಡೆಯಬೇಕಿತ್ತು.
ಆದರೆ ಬಾಂಗ್ಲಾದೇಶದಲ್ಲಿ ಮೀಸಲಾತಿಯ ವಿರುದ್ಧ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಈ ಚುಟುಕು ವಿಶ್ವಕಪ್ ಅನ್ನು ಬಾಂಗ್ಲಾದೇಶದಿಂದ ಯುಎಇಗೆ ಸ್ಥಳಾಂತರಿಸಲಾಗಿದೆ. ಇನ್ನು ಈ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ಎಲ್ಲಾ ಪಂದ್ಯಗಳು ದುಬೈ ಮತ್ತು ಶಾರ್ಜಾ ಮೈದಾನದಲ್ಲಿ ನಡೆಯಲಿವೆ. ಈ ನಡುವೆ ಈ ಚುಟುಕು ವಿಶ್ವಸಮರದ ಟಿಕೆಟ್‌ಗಳ ಮಾರಾಟವನ್ನು ಐಸಿಸಿ ಪ್ರಾರಂಭಿಸಿದೆ.
ಮಹಿಳಾ ಟಿ20 ವಿಶ್ವಕಪ್ 2024ರ ಟಿಕೆಟ್ ದರವನ್ನು ಐಸಿಸಿ ಅತ್ಯಂತ ಕಡಿಮೆ ಇರಿಸಿದೆ. ಗರಿಷ್ಠ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬರುವಂತೆ ಮಾಡುವ ಸಲುವಾಗಿ ಐಸಿಸಿ ಟಿಕೆಟ್ ದರವನ್ನು ಕೇವಲ 5 ದಿರ್ಹಮ್‌ಗಳಲ್ಲಿ ಇರಿಸಿದೆ. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 115 ರೂ. ಆಗಲಿದೆ. ಈ ಟಿಕೆಟ್ ಅನ್ನು ಐಸಿಸಿ ವೆಬ್‌ಸೈಟ್‌ನಿಂದ ಬುಕ್ ಮಾಡಬಹುದು. ಟಿಕೆಟ್ ದರಗಳನ್ನು ಬಿಡುಗಡೆ ಮಾಡಲು ಐಸಿಸಿ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾವನ್ನು ಆಯ್ಕೆ ಮಾಡಿದ್ದು, ಮಹಿಳಾ ಟಿ20 ವಿಶ್ವಕಪ್ 2024 ರ ಟಿಕೆಟ್ ದರಗಳನ್ನು ಲೇಸರ್ ಶೋ ಮೂಲಕ ಬಿಡುಗಡೆ ಮಾಡಲಾಗಿದೆ.
ಟಿಕೆಟ್ ದರವನ್ನು ಕೇವಲ 115 ರೂಗಳಿಗೆ ಇರಿಸಿರುವುದರ ಜೊತೆಗೆ ಐಸಿಸಿ, ಈ ಪಂದ್ಯಾವಳಿ ನೋಡಲು ಬರುವ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಉಚಿತ ಟಿಕೆಟ್‌ಗಳನ್ನು ನೀಡಲು ಮುಂದಾಗಿದೆ.