ಕೊಲಂಬೊ: ಭಾರತ ಮತ್ತು ಶ್ರೀಲಂಕಾ ವಿರುದ್ಧದ ಅಂತಿಮ ಏಕದಿನ ಪಂದ್ಯ ಇಂದು ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಕನಿಷ್ಠ ಮೂರು ಬದಲಾವಣೆ ಮಾಡುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಕೆ.ಎಲ್ ರಾಹುಲ್, ಶಿವಂ ದುಬೆ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಈ ಪಂದ್ಯದಿಂದ ಕೈ ಬಿಟ್ಟು ಇವರ ಸ್ಥಾನಕ್ಕೆ ರಿಷಭ್ ಪಂತ್, ಹರ್ಷಿತ್ ರಾಣಾ ಮತ್ತು ರಿಯಾನ್ ಪರಾಗ್ ಅವರನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿದುಬಂದಿದೆ. ರಾಹುಲ್ ಕಳೆದ ದ್ವಿತೀಯ ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದರು.
ಮೊದಲ ಪಂದ್ಯದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದ್ದರು. ಇದೀಗ ಸರಣಿ ಸೋಲಿನ ಭೀತಿಯಲ್ಲಿರುವ ಭಾರತ ತಂಡ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್ಗಳ ಲೆಕ್ಕಾಚಾರವನ್ನು ಬುಡಮೇಲು ಮಾಡುವಂತಹ ಪಂತ್ ಅವರನ್ನು ಕಣಕ್ಕಿಳಿಸಲು ತಂಡ ಬಯಸಿದೆ ಎನ್ನಲಾಗಿದೆ.
ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನ ಪಿಚ್ ಸಿನ್ನರ್ಗಳಿಗೆ ಹೆಚ್ಚಿನ ನೆರವು ನೀಡುವ ಕಾರಣ ಶಿವಂ ದುಬೆ ಅವರನ್ನು ಈ ಪಂದ್ಯದಿಂದ ಕೈಬಿಟ್ಟು ಅವರ ಬದಲಿಗೆ ಸ್ಪಿನ್ ಆಲ್ರೌಂಡರ್ ಆಗಿರುವ ರಿಯಾನ್ ಪರಾಗ್ ಸ್ಥಾನ ಪಡೆಯಬಹುದು. ಟಿ20 ಸರಣಿಯಲ್ಲಿ ಬ್ಯಾಟಿಂಗ್ ಜತೆಗೆ ಬೌಲಿಂಗ್ನಲ್ಲಿಯೂ ಪರಾಗ್ ಉತ್ತಮ ಪ್ರದರ್ಶನ ತೋರಿದ್ದರು. ಹೀಗಾಗಿ ಇವರಿಗೆ ಸ್ಥಾನ ಸಿಗುವುದು ಬಹುತೇಕ ಖಚಿತ.
ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಇದುವರೆಗೆ 150 ಏಕದಿನ ಪಂದ್ಯಗಳು ನಡೆದಿವೆ. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಹೆಚ್ಚು ಬಾರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 80 ಪಂದ್ಯಗಳನ್ನು ಗೆದ್ದಿದ್ದರೆ, ಚೇಸಿಂಗ್ ಮಾಡಿದ ತಂಡ ಕೇವಲ 59 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ.
ಮೊದಲ ಪಂದ್ಯದಲ್ಲಿ ಸ್ಪಿನ್ನರ್ಗಳು ಪ್ರಭಾವ ಬೀರಿದ್ದರು. ಹೀಗಾಗಿ ಎರಡನೇ ಏಕದಿನ ಪಂದ್ಯದಲ್ಲಿಯೂ ಸ್ಪಿನ್ ಬೌಲರ್ಗಳು ಪ್ರಾಬಲ್ಯ ತೋರುವ ನಿರೀಕ್ಷೆ ಇದೆ. ಪಂದ್ಯ ಸಾಗಿದಂತೆ ಈ ಪಿಚ್ ಅತ್ಯಂತ ತಿರುವ ಪಡೆದುಕೊಳ್ಳಲಿದೆ. ಬ್ಯಾಟಿಂಗ್ ನಡೆಸುವುದೇ ಒಂದು ಸವಾಲಾಗಿರಲಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳಬಹುದು.
ಸಂಭಾವ್ಯ ತಂಡಗಳು: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೀ), ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ.
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಕುಸಲ್ ಮೆಂಡಿಸ್ (ವಿಕೀ), ಸದೀರ ಸಮರವಿಕ್ರಮ, ಚರಿತ್ ಅಸಲಂಕ (ನಾಯಕ), ಕಾಮಿಂದು ಮೆಂಡಿಸ್, ಜನಿತ್ ಲಿಯಾನಗೆ, ದುನಿತ್ ವೆಲ್ಲಲಾಗೆ, ಅಕಿಲ ದನಂಜಯ, ಅಸಿತ ಫೆರ್ನಾಂಡೋ, ಜೆಫ್ರಿ ವಂಡರ್ಸೆ.