ಉಡುಪಿ: ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸದೃಢತೆಗೆ ಕ್ರೀಡೆ ಪೂರಕವಾಗಿದೆ. ಸದಾ ಕೆಲಸದ ಒತ್ತಡವನ್ನು ಅನುಭವಿಸುವ ಪೊಲೀಸರು ದೈಹಿಕ ಸಾಮರ್ಥ್ಯ ಹಾಗೂ ಸಾಮಾಜಿಕ ಒಲವು ಹೆಚ್ಚಿಸುವ ನಿಟ್ಟಿನಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಯಾವುದೇ ಒತ್ತಡವಿಲ್ಲದೇ ಪೂರ್ಣವಾಗಿ ಕ್ರೀಡೆಗಳಲ್ಲಿ ಭಾಗವಹಿಸಿ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಉಡುಪಿ ಅಜ್ಜರಕಾಡುವಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟಕ್ಕೆ ಬಲೂನು ಹಾರಿ ಬಿಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಸೇವೆ ಅಪಾರ.
ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದೈನಂದಿನ ಕರ್ತವ್ಯವನ್ನು ನಿಭಾಯಿಸಿಕೊಂಡು ಹೋಗುವುದರ ಜೊತೆಗೆ ಕ್ರೀಡಾ ಅಭಿರುಚಿ ಬೆಳೆಸಿಕೊಂಡಿರುವುದು ಉತ್ತಮ ವಿಚಾರ. ಕ್ರೀಡೆಗಳಲ್ಲಿ ಸೋಲು-ಗೆಲುವು ಸಹಜವಾಗಿದ್ದು, ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಆರೋಗ್ಯವನ್ನು ಸದೃಢವಾಗಿರಿಸಿಕೊಳ್ಳಿ ಎಂದರು.
ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕ ಮಿಥುನ್ ಹೆಚ್.ಎನ್ ಮಾತನಾಡಿ, ಪೊಲೀಸರು ಹಾಗೂ ಸಿಬ್ಬಂದಿ ಕ್ರೀಡೆಗಳಲ್ಲಿ ಸಕ್ರೀಯವಾಗಿ ಉತ್ಸಾಹದಿಂದ ಪಾಲ್ಗೊಂಡು, ಅದ್ಭುತವಾದ ಪ್ರದರ್ಶನ ನೀಡುವುದರೊಂದಿಗೆ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ ಎಂದರು.
ಕ್ರೀಡಾಕೂಟದಲ್ಲಿ ವಿವಿಧ ಪೊಲೀಸ್ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಡಿಎಆರ್ ಉಡುಪಿಯ ಆರ್.ಎಸ್.ಐ ಅಮೀರ್ ಪಾಶಾ ಪ್ರಮಾಣ ವಚನ ಬೋಧಿಸಿದರು. ಉಡುಪಿ ಡಿಎಆರ್ ಎಪಿಸಿ ಜೀವನ್ ನಾಯ್ಕ್ ಕ್ರೀಡಾಜ್ಯೋತಿ ತಂದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಸ್ವಾಗತಿಸಿದರು. ಯೋಗೇಶ್ ನಾಯ್ಕ್ ನಿರೂಪಿಸಿ, ಎಎಸ್‌ಪಿ ಎಸ್.ಟಿ ಸಿದ್ದಲಿಂಗಪ್ಪ ವಂದಿಸಿದರು.