ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಡಿ.7ರಿಂದ 10ರವರೆಗೆ ದಕ್ಷಿಣ ವಲಯ ಅಂತರ ವಿವಿ ಮಹಿಳಾ ಟೆನಿಸ್ ಹಾಗೂ ಡಿ.13ರಿಂದ 16ರವರೆಗೆ ಅಖಿಲ ಭಾರತ ಅಂತರ ವಿವಿ ಮಹಿಳಾ ಟೆನಿಸ್ ಟೂರ್ನಮೆಂಟ್ ಗಳನ್ನು ಮಣಿಪಾಲದಲ್ಲಿ ಆಯೋಜಿಸಲಿದೆ ಎಂದು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ.
ಮಣಿಪಾಲದ ಮಾಹೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ದಕ್ಷಿಣ ವಲಯ ಮಹಿಳಾ ಟೆನಿಸ್ ಟೂರ್ನಿಯಲ್ಲಿ ದಕ್ಷಿಣ ವಲಯಕ್ಕೆ ಸೇರಿದ 38 ವಿವಿ ಮಹಿಳಾ ತಂಡಗಳು ಸ್ಪರ್ಧಿಸಿದರೆ, ಅಖಿಲ ಭಾರತ ಅಂತರ ವಿವಿ ಸ್ಪರ್ಧೆಯಲ್ಲಿ ದೇಶದ ನಾಲ್ಕು ವಲಯಗಳಿಂದ ಒಟ್ಟು 16 ತಂಡಗಳು ದೇಶದ ಚಾಂಪಿಯನ್ ತಂಡದ ನಿರ್ಧಾರಕ್ಕಾಗಿ ಸ್ಪರ್ಧಿಸಲಿವೆ ಎಂದರು.
ಈಗಾಗಲೇ ಉತ್ತರ ವಲಯ, ಪಶ್ಚಿಮ ವಲಯ ಹಾಗೂ ಪೂರ್ವ ವಲಯಗಳಿಂದ ತಲಾ ನಾಲ್ಕು ತಂಡಗಳು ಅಖಿಲ ಭಾರತ ಮಟ್ಟದಲ್ಲಿ ಸ್ಪರ್ಧಿಸಲು ಅರ್ಹತೆಯನ್ನು ಪಡೆದುಕೊಂಡಿದ್ದರೆ, ದಕ್ಷಿಣ ವಲಯದಿಂದ ಸ್ಪರ್ಧಿಸುವ ನಾಲ್ಕು ತಂಡಗಳ ಆಯ್ಕೆ ಡಿ.7ರಿಂದ 19ರವರೆಗೆ ನಡೆಯುವ ದಕ್ಷಿಣ ವಲಯ ಅಂತರ ವಿವಿ ಟೂರ್ನಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಮೆರಿನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಎಂಐಟಿಯ ಟೆನಿಸ್ ಕೋರ್ಟ್ ಹಾಗೂ ಕೆಎಂಸಿಯ ತಲಾ ಎರಡು ಕೋರ್ಟ್‌ಗಳಲ್ಲಿ ಈ ಎಲ್ಲಾ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹೆಯ ಕ್ರೀಡಾ ಸಮಿತಿಯ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹೆಯ ಕುಲಪತಿ ಲೆ.ಜ.(ಡಾ.) ಎಂ.ಡಿ. ವೆಂಕಟೇಶ್, ಪ್ರೊ ವೈಸ್ ಚಾನ್ಸಲರ್‌ಗಳಾದ ಡಾ.ನಾರಾ ಯಣ ಸಭಾಹಿತ್, ಡಾ.ಶರತ್ ರಾವ್, ರಿಜಿಸ್ಟ್ರಾರ್ ಡಾ.ಪಿ.ಗಿರಿಧರ ಕಿಣಿ ಹಾಗೂ ಮಾಹೆಯ ಸಿಓಓ ಡಾ.ರವಿರಾಜ್ ಎನ್.ಸೀತಾರಾಮ್ ಉಪಸ್ಥಿತರಿದ್ದರು.