ಪ್ಯಾರಿಸ್: ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಭಾರತದ ಭರವಸೆಯ ಆಟಗಾರನಾಗಿದ್ದ ಲಕ್ಷ್ಯ ಸೇನ್ ಸೋಲುವುದರೊಂದಿಗೆ ಪದಕದ ಆಸೆಯೂ ಅಂತ್ಯಗೊಂಡಿದೆ. ಈ ಬಾರಿ ಬ್ಯಾಡ್ಮಿಂಟನ್ನಿಂದ ಭಾರತಕ್ಕೆ ಅಧಿಕ ಪದಕಗಳನ್ನು ಗೆಲ್ಲುವ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು.
ಆದರೆ ನಿರೀಕ್ಷೆಗಳೆಲ್ಲವೂ ಹುಸಿಯಾಗಿದೆ. ಪಿವಿ ಸಿಂಧು ಸೇರಿದಂತೆ ದೇಶದ ಟಾಪ್ ಮೋಸ್ಟ್ ಶಟ್ಲರ್‌ಗಳು ಈ ಬಾರಿ ಪದಕ ಗೆಲ್ಲಲು ವಿಫಲವಾಗಿದ್ದು, ಆಟಗಾರರ ಈ ನೀರಸ ಪ್ರದರ್ಶನಕ್ಕೆ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಮಾತನಾಡಿದ್ದು, ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
33ನೇ ಆವೃತ್ತಿಯ ಒಲಿಂಪಿಕ್ಸ್‌ನಲ್ಲಿ ಭಾರತ ಈವರೆಗೂ ಮೂರು ಪದಕಗಳನ್ನು ಗೆಲ್ಲಲಷ್ಟೇ ಶಕ್ತವಾಗಿದ್ದು, ಈ ಮೂರು ಪದಕಗಳು ಶೂಟಿಂಗ್ ವಿಭಾಗದಲ್ಲಿ ಬಂದಿದೆ. 2008ರ ನಂತರ ಇದೇ ಮೊದಲ ಬಾರಿಗೆ ಭಾರತದ ಶಟ್ಲರ್‌ಗಳು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲರಾಗಿರುವುದು. 2012 ರ ಒಲಿಂಪಿಕ್ಸ್‌ನಲ್ಲಿ, ಸೈನಾ ನೆಹ್ವಾಲ್ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಬ್ಯಾಡ್ಮಿಂಟನ್ನಲ್ಲಿ ದೇಶಕ್ಕೆ ಮೊದಲ ಪದಕವನ್ನು ಗೆದ್ದುಕೊಟ್ಟಿದ್ದರು.
ಆ ಬಳಿಕ ಪಿವಿ ಸಿಂಧು ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಹೀಗಾಗಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಎರಡಕ್ಕಿಂತ ಹೆಚ್ಚು ಪದಕಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ಈ ನಿರೀಕ್ಷೆಯೆಲ್ಲವೂ ಈಗ ಹುಸಿಯಾಗಿದೆ.