ಕಾರ್ಕಳ: ಬ್ರಹ್ಮಾವರ ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ ಹಾಗೂ ಕಟಪಾಡಿಯ ಕೆ.ಆರ್.ಎಸ್ ಕ್ರಿಕೆಟ್ ಅಕಾಡೆಮಿ ಜಂಟಿಯಾಗಿ ನಿಟ್ಟೆ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ 50 ವರ್ಷ ಮೇಲ್ಪಟ್ಟವರ ಕ್ರಿಕೆಟ್ ಟೂರ್ನಮೆಂಟ್ 2025ನ್ನು ನಿಟ್ಟೆಯ ಬಿ.ಸಿ.ಆಳ್ವ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕ್ರಿಕೆಟ್ ಮೈದಾನದಲ್ಲಿ ಜ.೨೪ ರಿಂದ ೨೬ರವರೆಗೆ ಆಯೋಜಿಸಿದೆ.
ಪಂದ್ಯಾವಳಿಯನ್ನು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್ ಉದ್ಘಾಟಿಸಿದರು. ಅವರು ಕ್ರೀಡೆಯ ಅಭಿವೃದ್ಧಿಯ ಬಗ್ಗೆ ಮಾತನಾಡಿದರು ಮತ್ತು ವಿಶ್ವವಿದ್ಯಾಲಯದ ಶೈಕ್ಷಣಿಕ ಸಾಧನೆಗಳ ಬಗ್ಗೆ ಒಳನೋಟಗಳನ್ನು ನೀಡಿದರು.
ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಅಶೋಕ್ ಅಡ್ಯಂತಾಯ ಮಾತನಾಡಿ, ಕ್ರಿಕೆಟ್ ನಲ್ಲಿ ಶಿಸ್ತಿನ ಮಹತ್ವವನ್ನು ಒತ್ತಿ ಹೇಳಿದರು. ಗೋವಾದ ಮಾಜಿ ರಣಜಿ ಆಟಗಾರ ದಯಾನಂದ ಬಂಗೇರ ಮತ್ತು ಬಿಸಿಸಿಐ ಅಂಪೈರ್ ಸುರತ್ಕಲ್ ನ ಸಂತೋಷ್ ಅವರನ್ನು ಸನ್ಮಾನಿಸಲಾಯಿತು. ಪಂದ್ಯಾವಳಿಯ ಸಂಯೋಜಕರಾದ ಶ್ರೀ ವಿಜಯ್ ಆಳ್ವ ಅವರ ಸ್ವಾಗತ ಭಾಷಣದೊಂದಿಗೆ ಪ್ರಾರಂಭವಾದ ಸಭಾ ಕಾರ್ಯಕ್ರಮವು ಸಂತೋಷ್ ಗೌಡ ಅವರ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು.
ಈ ಪಂದ್ಯಾವಳಿಯಲ್ಲಿ ಬಿಎಸಿಎ-ಕೆ.ಆರ್.ಎಸ್, ಚೋಳ ಟೈಗರ್ಸ್, ಮುಂಬೈ ಸೂಪರ್ ಸ್ಟಾರ್ಸ್ ಮತ್ತು ಬೆಂಗಳೂರು ಮಹಾರಾಜ ಎಂಬ ಹೆಸರಿನ ತಂಡಗಳು ಭಾಗವಹಿಸುತ್ತಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.