ಇಂಗ್ಲೆಂಡ್ ತಂಡದ ಆಲ್ರೌಂಡರ್ ಮೊಯೀನ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಈ ಹಿಂದೆ ಟೆಸ್ಟ್ ಮಾದರಿಗೆ ಗುಡ್ ಬೈ ಹೇಳಿದ್ದ ಮೊಯೀನ್ ಅಲಿ, ಇದೀಗ ಏಕದಿನ ಹಾಗೂ ಟಿ20 ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ.
ಇದಾಗ್ಯೂ ಅವರು ಫ್ರಾಂಚೈಸಿ ಲೀಗ್ ಕ್ರಿಕೆಟ್ನಲ್ಲಿ ಮುಂದುವರೆಯಲಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಪ್ರಕಟಿಸಲಾದ ಇಂಗ್ಲೆಂಡ್ ತಂಡದಲ್ಲಿ ಮೊಯೀನ್ ಅಲಿ ಅವರ ಹೆಸರು ಇರಲಿಲ್ಲ.
ಈ ಸರಣಿಯಿಂದ ಇಂಗ್ಲೆಂಡ್ ತಂಡದ ಹಿರಿಯ ಆಟಗಾರರಾದ ಡೇವಿಡ್ ಮಲಾನ್, ಜೋ ರೂಟ್, ಮೊಯೀನ್ ಅಲಿ ಸೇರಿದಂತೆ ಕೆಲವರನ್ನು ಕೈ ಬಿಡಲಾಗಿತ್ತು. ಇದರ ಬೆನ್ನಲ್ಲೇ ಮಲಾನ್ ನಿವೃತ್ತಿ ಘೋಷಿಸಿದ್ದರು. ಇದೀಗ ಮೊಯೀನ್ ಅಲಿ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. 2014 ರಲ್ಲಿ ಇಂಗ್ಲೆಂಡ್ ಪರ ಪಾದಾರ್ಪಣೆ ಮಾಡಿದ್ದ ಮೊಯೀನ್ ಅಲಿ 68 ಟೆಸ್ಟ್ ಪಂದ್ಯಗಳಿಂದ ಒಟ್ಟು 3094 ರನ್ ಕಲೆಹಾಕಿದ್ದಾರೆ. ಈ ವೇಳೆ 204 ವಿಕೆಟ್ಗಳನ್ನು ಸಹ ಕಬಳಿಸಿದ್ದಾರೆ. ಹಾಗೆಯೇ 138 ಏಕದಿನ ಪಂದ್ಯಗಳಿಂದ 2355 ರನ್ ಹಾಗೂ 111 ವಿಕೆಟ್ ಪಡೆದಿದ್ದಾರೆ.