ಉಡುಪಿ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದಲ್ಲಿ ಮಹಿಳೆಯರ ಕಯಾಕಿಂಗ್ ಸ್ಪರ್ಧೆಯಲ್ಲಿ ನಿರೀಕ್ಷೆಯಂತೆ ಬೆಂಗಳೂರು ನಗರ ತಂಡದ ರಾಷ್ಟ್ರೀಯ ಅಥ್ಲೀಟ್ ಸಮರಾ ಎ.ಚಾಕೋ ತಾನು ಸ್ಪರ್ಧಿಸಿದ ನಾಲ್ಕರಲ್ಲೂ ಜಯಗಳಿಸುವ ಮೂಲಕ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಹೊಸ ದಾಖಲೆ ಬರೆದರು.
ಬಹ್ಮಾವರ ತಾಲೂಕಿನ ಹೇರೂರು ಗ್ರಾಮದ ಮಡಿಸಾಲು ಹೊಳೆಯಲ್ಲಿ ನಡೆದ ಮಹಿಳೆಯರ ಕಯಾಕಿಂಗ್‌ನ 200ಮೀ. ಸಿಂಗಲ್ ಹಾಗೂ ಡಬಲ್ ಅಲ್ಲದೇ 500ಮೀ. ಸಿಂಗಲ್ ಹಾಗೂ ಡಬಲ್‌ನಲ್ಲಿ ಸಮರಾ ಅವರೇ ದೋಣಿಯನ್ನು ವೇಗವಾಗಿ ಹುಟ್ಟುಹಾಕಿ ಮೊದಲಿಗರಾಗಿ ಗುರಿಮುಟ್ಟುವ ಮೂಲಕ ನಾಲ್ಕೂ ಚಿನ್ನದ ಪದಕಗಳನ್ನು ಗೆದ್ದುಕೊಂಡರು.
ಜ.28ರಿಂದ ಉತ್ತರ ಖಂಡದಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಕಯಾಕಿಂಗ್‌ನಲ್ಲಿ ಸ್ಪರ್ಧಿಸಲು ಅಭ್ಯಾಸ ನಡೆಸುತ್ತಿರುವ ಸಮರಾ ಚಾಕೋ ಅವರು ಸಿಂಗಲ್ (ಕೆ-1)ನಲ್ಲಿ ವೇಗವಾಗಿ ಉಳಿದೆಲ್ಲಾ ಸ್ಪರ್ಧಿಗಳನ್ನು ಹಿಮ್ಮೆಟ್ಟಿಸಿ ಭಾರೀ ಅಂತರದಲ್ಲಿ ಮೊದಲಿಗರಾಗಿ ಗುರಿಮುಟ್ಟಿದರೆ, ಡಬಲ್ಸ್ (ಕೆ-2)ನಲ್ಲಿ ಹರಿಣಿ ಜೊತೆ ಇದೇ ಸಾಧನೆಯನ್ನು ಪುನರಾವರ್ತಿಸಿದರು.
ಈ ಮೂಲಕ ಅವರು ರಾಷ್ಟ್ರೀಯ ಕ್ರೀಡಾಕೂಟದಲ್ಲೂ ರಾಜ್ಯಕ್ಕೆ ಪದಕ ಗೆಲ್ಲಿಸಿಕೊಡುವ ಆತ್ಮವಿಶ್ವಾಸವನ್ನು ವೃದ್ಧಿಸಿ ಕೊಂಡರು. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿತ್ರದುರ್ಗ ಹಾಗೂ ಮಂಗಳೂರಿನ ಯಾವುದೇ ಎದುರಾಳಿ ಅವರಿಗೆ ಇಂದು ಸರಿಸಾಟಿಯಾಗಿರಲಿಲ್ಲ.