ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ತನ್ನ ಮೂರನೇ ಪಂದ್ಯದಲ್ಲೂ ತಂಡ ಜಯಭೇರಿ ಬಾರಿಸಿದೆ. ಹುಲುನ್ಬುಯಿರ್ನಲ್ಲಿನ ಮೊಕಿ ಟ್ರೈನಿಂಗ್ ಬೇಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು 8-1 ಅಂತರದಿಂದ ಬಗ್ಗು ಬಡಿದು ಟೀಮ್ ಇಂಡಿಯಾ ಸೆಮಿಫೈನಲ್ಗೆ ಪ್ರವೇಶಿಸಿದೆ. ಈ ಪಂದ್ಯದ ಮೊದಲ ಸುತ್ತಿನಲ್ಲೇ ಮೇಲುಗೈ ಸಾಧಿಸಿದ ಟೀಮ್ ಇಂಡಿಯಾ ಇಡೀ ಪಂದ್ಯವನ್ನು ಏಕಪಕ್ಷೀಯವಾಗಿಸುವಲ್ಲಿ ಯಶಸ್ವಿಯಾದರು.
ಭಾರತಕ್ಕೆ ಹ್ಯಾಟ್ರಿಕ್ ಗೆಲುವು:
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿನ ಫಾರ್ಮ್ ಅನ್ನು ಮುಂದುವರೆಸಿರುವ ಭಾರತ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಚೀನಾ ತಂಡವನ್ನು 3-0 ಅಂತರದಿಂದ ಸೋಲಿಸಿದ್ದ ಟೀಮ್ ಇಂಡಿಯಾ, ಆ ಬಳಿಕ ಜಪಾನ್ ವಿರುದ್ಧದ ಪಂದ್ಯವನ್ನು 5-1 ಅಂತರದಿಂದ ಗೆದ್ದುಕೊಂಡಿತ್ತು. ಇದೀಗ ಮಲೇಷ್ಯಾ ತಂಡವನ್ನು 8-1 ಅಂತರದಿಂದ ಬಗ್ಗು ಬಡಿದಿದೆ. ಈ ಮೂಲಕ ಒಟ್ಟು 9 ಅಂಕಗಳನ್ನು ಕಲೆಹಾಕಿ ಸೆಮಿಫೈನಲ್ಗೆ ಪ್ರವೇಶಿಸಿದೆ.
ಭಾರತ vs ಪಾಕ್ ಮುಖಾಮುಖಿ:
ಹ್ಯಾಟ್ರಿಕ್ ಗೆಲುವುಗಳೊಂದಿಗೆ ಸೆಮಿಫೈನಲ್ಗೆ ಪ್ರವೇಶಿಸಿರುವ ಭಾರತ ತಂಡವು ಗುರುವಾರ ಸೌತ್ ಕೊರಿಯಾ ವಿರುದ್ಧ ಕಣಕ್ಕಿಳಿಯಲಿದೆ. ಹಾಗೆಯೇ ಸೆಪ್ಟೆಂಬರ್ 14 ರಂದು ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನು ಎದುರಿಸಲಿದೆ.