ಅಬುಧಾಬಿಯಲ್ಲಿ ನಡೆದ ಏಷ್ಯನ್ ಸ್ಕೂಲ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್ ದೀಪಾಲಿ ಥಾಪಾ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಕಜಕಿಸ್ತಾನದ ಆಟಗಾರ್ತಿ ಅನೆಲಿಯಾ ಓರ್ಡ್ಬೆಕ್ ಅವರನ್ನು ಸೋಲಿಸಿ ಫೈನಲ್ಗೇರಿದ್ದ ದೀಪಾಲಿ, ಪದಕದ ಪಂದ್ಯದಲ್ಲಿ ಉಕ್ರೇನ್ ಆಟಗಾರ್ತಿ ಲ್ಯುಡ್ಮಿಲಾ ವಸಿಲ್ಚೆಂಕೊ ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
35 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ ದೀಪಾಲಿ ಥಾಪಾ ಮತ್ತು ಲ್ಯುಡ್ಮಿಲಾ ವಸಿಲ್ಚೆಂಕೊ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು. ಆದರೆ ಥಾಪಾ ತಮ್ಮ ಕೌಶಲ್ಯವನ್ನು ಬುದ್ಧಿವಂತಿಕೆಯಿಂದ ಬಳಸಿ ಏಷ್ಯನ್ ಸ್ಕೂಲ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಇದರೊಂದಿಗೆ ದೀಪಾಲಿ, ಈ ಸಾಧನೆ ಮಾಡಿದ ಮೊದಲ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಇರಾನ್, ಇರಾಕ್, ಚೀನಾ ಸೇರಿದಂತೆ 26 ದೇಶಗಳು ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದವು. ಇನ್ನು ಈ ಕ್ರೀಡಾಕೂಟದಲ್ಲಿ ಭಾರತದ ಆಟಗಾರರು ಒಟ್ಟು 15 ಪದಕಗಳನ್ನು ಗೆದ್ದಿದ್ದಾರೆ.