ಮಂಗಳೂರು: ಶಕ್ತಿನಗರದ ಶಕ್ತಿ ರೆಸಿಡೆನ್ಯಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜಿನ ೨೦೨೪-೨೫ನೇ ಸಾಲಿನ ವಾರ್ಷಿಕ ಕ್ರೀಡಾ ದಿನಾಚರಣೆಯು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾ ವಿಭಾಗದ ಅಧ್ಯಕ್ಷರಾದ ಡಾ.ಕಿಶೋರ್ ಕುಮಾರ್ ಸಿ.ಕೆ ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಗ್ನಿ, ವಾಯು, ಪ್ರಥ್ವಿ ಮತ್ತು ಜಲ ಈ ವಿಭಾಗಗಳ ವಿದ್ಯಾರ್ಥಿಗಳಿಂದ ಬ್ಯಾಂಡ್ ಸಮೇತವಾಗಿರುವ ಆಕರ್ಷಕ ಪಥ ಸಂಚಾಲನ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಡಾ. ಕಿಶೋರ್ ಕುಮಾರ್ ಸಿ.ಕೆ ಮಾತನಾಡಿ ನಾವು ಕ್ರೀಡಾ ಪಟುಗಳು ಆದಾಗ ನಮ್ಮ ದೇಹ ಸದೃಢವಾಗುತ್ತದೆ. ನಾವು ದಿನನಿತ್ಯ ಆಟವಾಡುವುದು ಹಾಗೂ ಶ್ರದ್ಧೆಯಿಂದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು.
ಶಕ್ತಿ ವಿದ್ಯಾಸಂಸ್ಥೆಯು ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುತ್ತಿರುವುದನ್ನು ನಾನು ಪತ್ರಿಕೆ ಮೂಲಕ ತಿಳಿದುಕೊಂಡಿದ್ದೇನೆ. ಪ್ರತಿಯೊಬ್ಬ ವಿದ್ಯಾರ್ಥಿಯು ಒಂದಲ್ಲ ಒಂದು ಕ್ರೀಡೆಯಲ್ಲಿ ಭಾಗವಹಿಸಬೇಕು. ವಾರ್ಷಿಕ ಕ್ರೀಡಾ ಚಟುವಟಿಕೆಯಲ್ಲಿ ನಾವೆಲ್ಲರೂ ಭಾಗವಹಿಸಬೇಕು. ಅದರಲ್ಲಿ ಸೋಲಬಹುದು ಅಥವಾ ಗೆಲ್ಲಬಹುದು. ಇದನ್ನು ನಾವು ನೋಡಬಾರದು ಸೋಲು ಗೆಲುವುವನ್ನು ಸಮಾನವಾಗಿ ಸ್ವೀಕರಿಸಿ, ಭಾಗವಹಿಸುವುದೇ ಮುಖ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ. ಮಾತನಾಡಿ ಶಕ್ತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗುತ್ತಿರುವುದು ವಿದ್ಯಾಸಂಸ್ಥೆಯು ಕ್ರೀಡೆಗೆ ಕೊಡುತ್ತಿರುವ ಪ್ರೋತ್ಸಾಹವನ್ನು ತೋರಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶಮೂರ್ತಿ ಉಪಸ್ಥಿತರಿದ್ದರು. ಸ್ವಾಗತವನ್ನು ಶಕ್ತಿ ರೆಸಿಡೆನ್ಸಿಯಲ್ ಪ್ರಾಂಶುಪಾಲೆ ಬಬಿತಾ ಸೂರಜ್ ನೆರವೇರಿಸಿದರು. ಧನ್ಯವಾದವನ್ನು ಅದ್ಯಾಪಕಿ ಪ್ರಿಯಾಂಕ ರೈ ಅರ್ಪಿಸಿದರು. ಕಾರ್ಯಕ್ರಮವನ್ನು ಆಂಗ್ಲ ಉಪನ್ಯಾಸಕಿ ಅಶ್ವಿನಿ ನಿರೂಪಿಸಿದರು.